ನವದೆಹಲಿ: ಹಿರಿಯ ರಾಜಕಾರಣಿ ಸೀತಾರಾಂ ಯೆಚೂರಿ ಅವರ ಮೃತದೇಹವನ್ನು ಕುಟುಂಬಸ್ಥರು ಸಂಶೋಧನಾ ಉದ್ದೇಶಗಳಿಗಾಗಿ ನವದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)ಗೆ ದಾನ ಮಾಡಿದ್ದಾರೆ.
72 ವರ್ಷದ ಸೀತಾರಾಂ ಯೆಚೂರಿ ಉಸಿರಾಟದ ಸೋಂಕಿನಿಂದ ಬಳಲುತ್ತಿದ್ದರು. ಇಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಬೋಧನೆ ಮತ್ತು ಸಂಶೋಧನಾ ಉದ್ದೇಶಗಳಿಗಾಗಿ ಸೀತಾರಾಂ ಯೆಚೂರಿ ಅವರ ಕುಟುಂಬವು ಮೃತದೇಹವನ್ನು ನವದೆಹಲಿಯ AIIMSಗೆ ದಾನ ಮಾಡಿದೆ ಎಂದು ಏಮ್ಸ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸೀತಾರಾಂ ಯೆಚೂರಿ ಆಗಸ್ಟ್ 19ರಿಂದ ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ನ್ಯುಮೋನಿಯಾ ಸೋಂಕು ಕಂಡು ಬಂದಿತ್ತು. ರೋಗಗಳನ್ನು ಅನ್ವೇಷಿಸಲು, ವಿವಿಧ ಅಂಗಗಳ ಮೇಲೆ ವೈದ್ಯಕೀಯ ಪರಿಸ್ಥಿತಿಗಳ ಪರಿಣಾಮಗಳನ್ನು ಅಧ್ಯಯನ ಮಾಡಲು ಮತ್ತು ಹೊಸ ಚಿಕಿತ್ಸೆಗಳು ಅಥವಾ ಔಷಧಿಗಳನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಮತ್ತು ಸಂಶೋಧಕರು ದಾನ ಮಾಡಿದ ಮೃತದೇಹಗಳನ್ನು ಬಳಸಲಾಗುತ್ತದೆ. ಸದ್ಯ ಯೆಚೂರಿ ಸಾವಿನ ನಂತರ ಅವರ ಕುಟುಂಬಸ್ಥರು ದೇಹ ದಾನ ಮಾಡಿದ್ದಕ್ಕೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಯೆಚೂರಿ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕೇರಳ ಸಿಎಂ ಪಿಣರಾಯಿ ವಿಜಯನ್, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸೀತಾರಾಂ ಯೆಚೂರಿ ಅವರು 2005ರಿಂದ 2017ರವರೆಗೆ 12 ವರ್ಷಗಳ ಕಾಲ ರಾಜ್ಯಸಭಾ ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (SFI) ಮೂಲಕ ಸಾರ್ವಜನಿಕ ರಂಗ ಪ್ರವೇಶಿಸಿದ ಯೆಚೂರಿ, 1975 ರಲ್ಲಿ ಸೀತಾರಾಮ್ ಯೆಚೂರಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಸದಸ್ಯತ್ವ ಪಡೆದಿದ್ದರು. ಮೂರು ಅವಧಿಗೆ ಸಿಪಿಐಎಂ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಲೋಕಸಭಾ ಚುನಾವಣೆಯಲ್ಲಿ ಇಂಡಿಯಾಕೂಟ ರಚನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದಲ್ಲಿ (ಜೆಎನ್‌ಯು) ವಿದ್ಯಾರ್ಥಿಯಾಗಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಅವರನ್ನು ಬಂಧಿಸಲಾಗಿತ್ತು. 1977 ಮತ್ತು 1988 ರ ನಡುವೆ ಮೂರು ಬಾರಿ ಜೆಎನ್ ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
2004 ರಲ್ಲಿ ಯುಪಿಎ ಸರ್ಕಾರವನ್ನು ರಚಿಸುವಲ್ಲಿ ಸೀತಾರಾಂ ಯೆಚೂರಿ ಮಹತ್ವದ ಪಾತ್ರವನ್ನು ವಹಿಸಿದರು. ಇತ್ತೀಚೆಗೆ 45 ಲ್ಯಾಟರಲ್ ಎಂಟ್ರಿ ಅಧಿಕಾರಿಗಳ ನೇಮಕ ಜಾಹೀರಾತು ಕುರಿತು ಕೇಂದ್ರ ಸರ್ಕಾರದ ವಿರುದ್ಧ ಯೆಚೂರಿ ತೀವ್ರ ಟೀಕೆ ಮಾಡಿದ್ದರು. ನಂತರ ಕೇಂದ್ರ ಸರ್ಕಾರ ಆ ಹುದ್ದೆಗಳ ಜಾಹೀರಾತನ್ನು ಹಿಂಪಡೆದಿತ್ತು.