ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿನ ಅದ್ಭುತ ಪ್ರದರ್ಶನವನ್ನು ಭಾರತೀಯ ಹಾಕಿ ತಂಡ ಮುಂದುವರೆಸಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಭಾರತ ಹಾಕಿ ತಂಡ ಸತತ ನಾಲ್ಕನೇ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದೆ.
ರೌಂಡ್ ರಾಬಿನ್ ಸುತ್ತಿನಲ್ಲಿ ಇಂದು ನಡೆದ ನಾಲ್ಕನೇ ಪಂದ್ಯದಲ್ಲಿ ಭಾರತ ಹಾಕಿ ತಂಡ ದಕ್ಷಿಣ ಕೊರಿಯಾ ತಂಡವನ್ನು 3-1 ಗೋಲುಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. ತಂಡದ ಪರ ನಾಯಕ ಹರ್ಮನ್‌ಪ್ರೀತ್ ಸಿಂಗ್ 2 ಗೋಲು ಗಳಿಸಿದರೆ, ಅರಿಜಿತ್ ಸಿಂಗ್ ಒಂದು ಗೋಲು ಗಳಿಸಿ ಮಿಂಚಿದರು.
ಸಿಕ್ಕ ಎರಡೂ ಪೆನಾಲ್ಟಿ ಕಾರ್ನರ್ ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ನಾಯಕ ಹರ್ಮನ್‌ಪ್ರೀತ್ ಯಶಸ್ವಿಯಾದರು. ಮೊದಲ ಸೆಷನ್ ನ ಎಂಟನೇ ನಿಮಿಷದಲ್ಲಿ ಅರಿಜಿತ್ ಸಿಂಗ್ ಹಂಡ್ಲಾನ್ ಭಾರತದ ಗೋಲಿನ ಖಾತೆ ತೆರೆದರೆ, ನಂತರದ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ನ್ನು ನಾಯಕ ಹರ್ಮನ್ ಪ್ರೀತ್ ಸಿಂಗ್ ಗೋಲಾಗಿಸಿದರು.
ಈ ಎರಡು ಗೋಲುಗಳಿಂದಾಗಿ ಭಾರತ ತಂಡ ಮೊದಲಾರ್ಧದಲ್ಲಿ 2-0 ಮುನ್ನಡೆ ಸಾಧಿಸಿತು. ಆನಂತರ ದಕ್ಷಿಣ ಕೊರಿಯಾ ಗೋಲು ದಾಖಲಿಸಲು ಹರಸಾಹಸ ಪಟ್ಟಿತು. ಎರಡನೇ ಸೆಷನ್ ನಲ್ಲಿ ಎರಡೂ ತಂಡಗಳಿಂದ ಸಮಬಲದ ಹೋರಾಟ ಕಂಡು ಬಂದಿತು. ಕೊನೆಯ ನಿಮಿಷದಲ್ಲಿ ಕೊರಿಯಾ ಪರ ಯಾಂಗ್ ಮೊದಲ ಗೋಲು ದಾಖಲಿಸಿದರು. ಆದರೆ, ಎರಡನೇ ಸೆಷನ್ ನಲ್ಲಿ ಭಾರತದಿಂದ ಗೋಲು ದಾಖಲಾಗಲಿಲ್ಲ.
ಆನಂತರ ಮೂರನೇ ಸೆಷನ್ ನಲ್ಲಿ ನಾಯಕ ಹರ್ಮನ್‌ಪ್ರೀತ್ ಪೆನಾಲ್ಟಿ ಕಾರ್ನರ್ ನ್ನು ಮತ್ತೊಂದು ಗೋಲಾಗಿ ಪರಿವರ್ತಿಸಿದರು. ಹೀಗಾಗಿ ಬಾರತ ತಂಡ 3-1ಕ್ಕೆ ಏರಿಕೆ ಕಂಡಿತು. ಕೊನೆಗೂ ಭಾರತ ತಂಡ ಗೆದ್ದು ಬೀಗಿತು.
ಭಾರತ ತಂಡವು ಮೊದಲ ಪಂದ್ಯದಲ್ಲಿಯೇ ಆತಿಥೇಯ ಚೀನಾವನ್ನು 3-0 ಅಂತರದಿಂದ ಸೋಲಿಸಿತ್ತು. ಎರಡನೇ ಪಂದ್ಯದಲ್ಲಿ ಜಪಾನ್ ತಂಡವನ್ನು 5-1 ಗೋಲುಗಳಿಂದ ಸೋಲಿಸಿದರೆ, ಮೂರನೇ ಪಂದ್ಯದಲ್ಲಿ ಮಲೇಷ್ಯಾವನ್ನು 8-1 ಗೋಲುಗಳಿಂದ ಸೋಲಿಸಿತು. ಶನಿವಾರ ಟೂರ್ನಿಯ ಫೈನಲ್ ಪಂದ್ಯ ನಡೆಯಲಿದ್ದು, ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.