ಭಾರತೀಯ ಸೈನ್ಯಕ್ಕೆ ಲೆಪ್ಟಿನೆಂಟ್ ಆಗಿ ಆಯ್ಕೆಗೊಂಡ ಭಾರತಾಂಬೆಯ ಹೆಮ್ಮೆಯ ಪುತ್ರ ಭರತ್ ಬಾಬು ದೇವಾಡಿಗರಿಗೆ ಹುಟ್ಟೂರಿನ ಜನರು, ಗ್ರಾಮ ಪಂಚಾಯತ್ ವತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಪಂ ಸಭಾಭವನದಲ್ಲಿ ಬುಧವಾರ(ಸೆ.11) ಗೌರವಾರ್ಥವಾಗಿ ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ತಮ್ಮ ಗ್ರಾಮದ ಹೆಮ್ಮೆಯ ಯೋಧನನ್ನು ಅವರ ತಂದೆ-ತಾಯಿಗೂ ಸೇರಿಸಿ ಸನ್ಮಾನಿಸಿ ಅಭಿನಂದಿಸಿದರು. ಭರತ್ ಬಾಬು ದೇವಾಡಿಗ ಗ್ರಾಮದ ಬೊಬ್ಬರಮಕ್ಕಿ ಎಂಬಲ್ಲಿ ಹುಟ್ಟಿದವರು. ಬಾಬು ದೇವಾಡಿಗ ಹಾಗೂ ರಾಗಿಣಿಯವರ ಮಗನಾದ ಭರತ್, ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕುಂದಾಪುರದ ಎಚ್.ಎಂ.ಎಂ ಆಂಗ್ಲ ಶಾಲೆಯಲ್ಲಿ ಪೂರೈಸಿದ್ದು, ಪಿಯುಸಿಯನ್ನು ಆರ್.ಎನ್. ಶೆಟ್ಟಿ ಕಾಲೇಜಿನಲ್ಲಿ ಮುಗಿಸಿದ್ದಾರೆ. ಪದವಿ ಶಿಕ್ಷಣವನ್ನು ಭಂಡರ್ ಕಾರ್ಸ್ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜಿನಲ್ಲಿ ಪೂರೈಸಿ, ವಿಜ್ಞಾನ ವಿಭಾಗದಲ್ಲಿ ಪದವಿ ಪಡೆದಿದ್ದಾರೆ.

ಓದುವ ಸಂದರ್ಭದಿಂದಲೂ ಇವರು ಸೈನ್ಯ ಸೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಕಟ್ಟಿಕೊಂಡವರು. ಅದರಂತೆ ಪದವಿ ಮುಗಿಯುತ್ತಿದ್ದಂತೆ ಭಾರತೀಯ ಸೇನೆ ಸೇರಿ, ತರಬೇತಿ ಮುಗಿಸಿ ಈಗ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿದ್ದಾರೆ. ಹೀಗಾಗಿ ತಮ್ಮ ಗ್ರಾಮದ ಹೆಮ್ಮೆಯ ಪುತ್ರ ಸೈನ್ಯದಲ್ಲಿ ಹುದ್ದೆ ಅಲಂಕರಿಸಿದ್ದಕ್ಕೆ ಗ್ರಾಮ ಪಂಚಾಯತ್ ವತಿಯಿಂದ ಗೌರವಿಸಿ ಅಭಿನಂದಿಸಲಾಗಿದೆ. ಭರತ್ ಸೇನೆಯಲ್ಲಿ ಇನ್ನೂ ಉತ್ತಮ ಹುದ್ದೆಗಳನ್ನು ಅಲಂಕರಿಸಿ, ಗ್ರಾಮಕ್ಕೆ, ರಾಜ್ಯಕ್ಕೆ ಹಾಗೂ ದೇಶಕ್ಕೆ ಉತ್ತಮ ಹೆಸರು ತರಲಿ ಎಂದು ಈ ಸಂದರ್ಭದಲ್ಲಿ ಹಾರೈಸಿದ್ದಾರೆ. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ನರಸಿಂಹ ದೇವಾಡಿಗ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಗಣೇಶ ಎಂ ಸೇರಿದಂತೆ ಗ್ರಾಪಂನ ಸರ್ವ ಸದಸ್ಯರು, ಗ್ರಾಮಸ್ಥರು, ಸ್ನೇಹಿತರು, ಕುಟುಂಬಸ್ಥರು ಪಾಲ್ಗೊಂಡು ಶುಭ ಹಾರೈಸಿದರು.