ನವದೆಹಲಿ: ರಾಜ್ಯಕ್ಕೆ 1 ವರ್ಷಗಳಲ್ಲಿ ಬೇರೆ ಬೇರೆ ವಲಯಗಳಲ್ಲಿ 1.35 ಲಕ್ಷ ಕೋಟಿ ರೂ. ಹೂಡಿಕೆ ಬಂದಿದೆ ಎಂದು ಕೈಗಾರಿಕಾ ಇಲಾಖೆ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ದೆಹಲಿಗೆ ತೆರಳಿರುವ ಸಚಿವ ಎಂ.ಬಿ.ಪಾಟೀಲ್ 2 ದಿನಗಳಿಂದ ಅನೇಕ ದೇಶಗಳ ರಾಯಭಾರಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮತಾನಾಡಿರುವ ಅವರು, ಸಿಂಗಾಪುರ ಹೈಕಮಿಷನರ್ ಭೇಟಿಯಾಗಿ ವಿವಿಧ ವಲಯಗಳಿಗೆ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದೇವೆ. ಆಸ್ಟ್ರೇಲಿಯಾ ಹೈಕಮಿಷನರ್ ಭೇಟಿ ಮಾಡಿ ಶಿಕ್ಷಣ, ಬಾಹ್ಯಾಕಾಶ, ಬಯೋಟೆಕ್, ಐಟಿ ಅಭಿವೃದ್ಧಿ ಮತ್ತು ಹೂಡಿಕೆ ಬಗ್ಗೆ ಚರ್ಚಿಸಿದ್ದೇನೆ ಎಂದಿದ್ದಾರೆ.
ಅಲ್ಲದೇ, ಜರ್ಮನಿ, ದಕ್ಷಿಣ ಕೊರಿಯಾ ರಾಯಭಾರಿಗಳ ಭೇಟಿಯಾಗಿದ್ದೇನೆ. ಇನ್ವೆಸ್ಟ್ ಕರ್ನಾಟಕ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇವೆ. ರಾಯಭಾರಿಗಳ ಜೊತೆಗೆ ಉದ್ಯಮಿಗಳನ್ನು ಸಹ ಭೇಟಿ ಮಾಡಿದ್ದೇನೆ. ವಿಭಿನ್ನವಾಗಿ ಜಾಗತಿಕ ಬಂಡವಾಳ ಹೂಡಿಕೆ ಕಾರ್ಯಕ್ರಮ ಮಾಡುತ್ತಿದ್ದೇವೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಿ ಚರ್ಚೆ ನಡೆಸಿದ್ದೇನೆ. ಕರ್ನಾಟಕಕ್ಕೆ ಡಿಫೆನ್ಸ್ ಕಾರಿಡಾರ್ ನೀಡುವಂತೆ ಮನವಿ ಮಾಡಿದ್ದೇನೆ. ಹೆಲಿಕಾಪ್ಟರ್ ಸೇರಿ ಸೇನಾ ಸಾಮಗ್ರಿ ಉತ್ಪಾದನೆಗೆ ಅನುಕೂಲವಾಗಲಿದೆ. ಕಾರವಾರ ಸೇನಾ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಬಳಕೆಗೆ ಮತ್ತು ರನ್ವೇ ವಿಸ್ತರಿಸಲು ಕೇಳಲಾಗಿದೆ ಎಂದು ಹೇಳಿದ್ದಾರೆ.