ನಟ ಧನುಶ್ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತಮಿಳು ಚಿತ್ರರಂಗ ಹಿಂಪಡೆದಿದೆ. ತಮಿಳು ಚಿತ್ರರಂಗದಲ್ಲಿ ಭಾರಿ ಹೆಸರು ಮಾಡಿರುವ ನಟ ಧನುಶ್, ಬಾಲಿವುಡ್, ಹಾಲಿವುಡ್ ಸಿನಿಮಾಗಳಲ್ಲಿ ಹೆಚ್ಚು ಆಸಕ್ತಿ ವಹಿಸಿ ನಮ್ಮ ಚಿತ್ರರಂಗ ಕಡೆಗಣಿಸಿದ್ದಾರೆಂದು ತಮಿಳು ಚಿತ್ರರಂಗದ ನಿರ್ಮಾಪಕರ ಸಂಘ ನಿಷೇಧ ಹೇರಿತ್ತು. ಈಗ ಆ ನಿರ್ಬಂಧ ಹಿಂಪಡೆಯಲಾಗಿದೆ.
ತಮಿಳು ಚಿತ್ರರಂಗದ ಕಲಾವಿದರ ಸಂಘ ಮಧ್ಯಸ್ಥಿಕೆ ವಹಿಸಿ, ನಿರ್ಮಾಪಕರ ಸಂಘದೊಂದಿಗೆ ಮಾತುಕತೆ ನಡೆಸಿದ ಮೇಲೆ ಈ ವಿವಾದ ಅಂತ್ಯ ಕಂಡಿದೆ. ಹೀಗಾಗಿ ಧನುಶ್ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಲಾಗಿದೆ.
ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ (ಟಿಎಫ್‌ಪಿಸಿ) ಈ ಹಿಂದೆ ಧನುಷ್ ವಿರುದ್ಧ ಕೆಲ ಆರೋಪಗಳನ್ನು ಮಾಡಿತ್ತು. ಧನುಶ್ ವೃತ್ತಿಪರವಲ್ಲದ ನಡವಳಿಕೆ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿತ್ತು. ನಿರ್ಮಾಪಕರಿಂದ ಮುಂಗಡ ಹಣ ಪಡೆದ ಬಳಿಕವೂ ಡೇಟ್ಸ್ ನೀಡದೆ ಸಿನಿಮಾದಲ್ಲಿ ನಟಿಸಲು ನಿರಾಕರಿಸಿದ್ದಾರೆ ಎಂದು ನಿರ್ಮಾಪಕರ ಸಂಘ ಆರೋಪಿಸಿತ್ತು. ಈಗ ಧನುಷ್ ಮೇಲೆ ಹೇರಲಾಗಿದ್ದ ನಿಷೇಧವನ್ನು ನಿರ್ಮಾಪಕರ ಸಂಘ ಹಿಂತೆಗೆದುಕೊಂಡಿದೆ.
ತೆನಾಂಡಾಲ್ ಫಿಲಮ್ಸ್ ಮತ್ತು 5 ಸ್ಟಾರ್ ಕ್ರಿಯೇಷನ್ಸ್ ನಿರ್ಮಾಣ ಸಂಸ್ಥೆಗಳ ನಿರ್ಮಾಪಕರುಗಳು ನಿರ್ಮಾಪಕರ ಸಂಘಕ್ಕೆ ಧನುಶ್ ವಿರುದ್ಧ ದೂರು ನೀಡಿದ ನಂತರ ಧನುಶ್ ವಿರುದ್ಧ ನಿಷೇಧ ಹೇರಲಾಗಿತ್ತು. ಈಗ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲಾಗಿದೆ. ನಟ ಧನುಶ್ ಈಗ 5 ಸ್ಟಾರ್ ಕ್ರಿಯೇಷನ್ಸ್ ನಿಂದ ಪಡೆದಿದ್ದ ಹಣವನ್ನು ಮರಳಿಸಿದ್ದಾರೆ ಎನ್ನಲಾಗಿದೆ.