ಆನೇಕಲ್: ಕನ್ನಡ ಮಾತನಾಡಿದ್ದಕ್ಕೆ ಕಾರ್ಮಿಕನ ಮೇಲೆ ಕರ್ನಾಟಕದಲ್ಲಿಯೇ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಮೂವರು ಕನ್ನಡಿಗನ ಮೇಲೆ ಕರ್ನಾಟಕದಲ್ಲಿಯೇ ಹಲ್ಲೆ ಮಾಡಿದ್ದಾರೆ. ಈ ಘಟನೆ ಆನೇಕಲ್ ನಲ್ಲಿ ನಡೆದಿದೆ. ಈ ಕುರಿತು ಆನೇಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಶಿವಲಿಂಗ ಹಲ್ಲೆಗೊಳಗಾದ ಕಾರ್ಮಿಕ. ನಮ್ಮ ಮುಂದೆ ಕನ್ನಡ ಮಾತನಾಡಬೇಡ. ಹಿಂದಿ ಮಾತನಾಡು ಎಂದು ಹಲ್ಲೆ ಮಾಡಿದ್ದಾರೆ. ಕಾರ್ಮಿಕ ಶಿವಲಿಂಗ, ಕೃಷ್ಣಮೂರ್ತಿ ಕಾರ್ಖಾನೆಯಲ್ಲಿ ಮಗ್ಗದ ಕೆಲಸ ಮಾಡುತ್ತಿದ್ದ. ಈ ಕಾರ್ಖಾನೆಯಲ್ಲೇ ಉತ್ತರ ಪ್ರದೇಶದ ಮೂವರು ಕೆಲಸ ಮಾಡುತ್ತಿದ್ದರು. ಈ ವೇಳೆ ಭಾಷೆಯ ವಿಷಯದಲ್ಲಿ ಕಿರಿಕ್ ಮಾಡಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಕಬ್ಬಿಣದ ರಾಡ್, ಮಗ್ಗದ ವಸ್ತುಗಳಿಂದ ಶಿವಲಿಂಗನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ತಲೆ, ಕಿವಿಭಾಗಕ್ಕೆ ಗಾಯಗಳಾಗಿವೆ. ಸದ್ಯ ಗಾಯಾಳು ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.