ಭಾರತೀಯ ಮೂಲದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಮಧ್ಯೆ ಮುಖಾಮುಖಿ ಚರ್ಚೆ ನಡೆದಿದ್ದು, ಇಡೀ ಜಗತ್ತಿನ ಗಮನ ಸೆಳೆದಿದೆ. ಇಬ್ಬರೂ ನಾಯಕರು ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿ ಜನರ ಮನಸ್ಸು ಗೆಲ್ಲುವಲ್ಲಿ ಸಫಲರಾಗಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇದರ ಭಾಗವಾಗಿಯೇ ಈ ಚರ್ಚೆ ಕೂಡ ನಡೆದಿತ್ತು. ಅಮೆರಿಕದ ಸಂಪ್ರದಾಯದಂತೆ ಅಧ್ಯಕ್ಷೀಯ ಚುನಾವಣೆ ವೇಳೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ಮುಖಾಮುಖಿ ನಿಂತು ಚರ್ಚೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ದೊಡ್ಡ ಕಿತ್ತಾಟ ನಡೆಯುತ್ತದೆ. ಹೀಗಾಗಿ ಈ ಬಾರಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿತರಾದ ಕಮಲಾ ಹ್ಯಾರಿಸ್ ಹಾಗೂ ಡೊನಾಲ್ಡ್ ಟ್ರಂಪ್ ಮಧ್ಯೆ ಫೈಟ್ ನಡೆದಿದೆ.
ಚರ್ಚೆಯು ಗೂಗಲ್ ಟ್ರೆಂಡ್ಸ್ ನಲ್ಲಿ ಭಾರೀ ಹುಡುಕಾಟವಾಗಿದೆ. ಈ ವೇದಿಕೆಯಲ್ಲಿ ಅಮೆರಿಕಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು. ಅಮೆರಿಕದಲ್ಲಿನ ನಿರುದ್ಯೋಗ ಸಮಸ್ಯೆ, ತೆರಿಗೆ ಸಮಸ್ಯೆಗಳು, ವೈದ್ಯಕೀಯ ಸೌಲಭ್ಯಗಳು, ಗಡಿ ರಕ್ಷಣೆ, ಆಂತರಿಕ ಭದ್ರತೆ, ವಿದೇಶಾಂಗ ನೀತಿಗಳೂ ಸೇರಿದಂತೆ ಇಸ್ರೇಲ್ ಹಮಾಸ್, ಉಕ್ರೇನ್ – ರಷ್ಯಾ ಯುದ್ಧದ ಕುರಿತು ಚರ್ಚೆ ನಡೆಯಿತು.
ಪ್ರಶ್ನೆಗಳನ್ನು ಚರ್ಚಾಕೂಟದ ಆಯೋಜಕರು ಸಿದ್ಧಪಡಿಸಿದ್ದು, ಪ್ರತಿಯೊಂದು ವಿಷಯಾಧಾರಿತ ಪ್ರಶ್ನೆಗಳಿಗೆ ಉಭಯ ನಾಯಕರು ಜಾಣ್ಮೆಯಿಂದ, ಚತುರತೆಯಿಂದ ಉತ್ತರ ನೀಡಿದ್ದಾರೆ. ಈ ವೇಳೆ ಮಾತನಾಡಿದ ಕಮಲಾ ಹ್ಯಾರಿಸ್, ಟ್ರಂಪ್ ಅಧಿಕಾರ ಬಿಡುವಷ್ಟರಲ್ಲಿ ಅಮೆರಿಕದಲ್ಲಿ ಅರಾಜಕತೆ ಆವರಿಸಿತ್ತು. ಆಂತರಿಕ ಸಂಘರ್ಷಗಳು ನಡೆದಿದ್ದವು. ನಿರುದ್ಯೋಗ ತಾಂಡವವಾಡುತ್ತಿತ್ತು. ಅದೆಲ್ಲವನ್ನೂ ನಾವು ಸರಿದಾರಿಗೆ ತಂದಿದ್ದೇವೆ ಎಂದರು.
ಹಲವಾರು ಪಾಲಿಸಿಗಳ ಮೂಲಕ ಜನರಿಗೆ ತೆರಿಗೆ ಹೊರೆ ಇಳಿಸಲಾಗಿದೆ. ಟ್ರಂಪ್ ಅವರ ಕೆಟ್ಟ ಆರ್ಥಿಕ ನೀತಿಗಳಿಂದಾಗಿ ಮಧ್ಯಮ ವರ್ಗವು ಹೆಚ್ಚಾಗಿ ತೊಂದರೆಗೊಳಗಾಯಿತು ಎಂದು ಆರೋಪಿಸಿದ್ದಾರೆ.
ಇದಕ್ಕೆ ಉತ್ತರ ನೀಡಿದ ಟ್ರಂಪ್, ನಾವು ಉತ್ತಮ ಆರ್ಥಿಕ ನೀತಿಗಳನ್ನೇ ಅನುಸರಿಸಿದ್ದೆವು. ಮಧ್ಯಮ ವರ್ಗಕ್ಕೆ ಇದರಿಂದ ಯಾವುದೇ ಹೊರೆಯಾಗಿಲ್ಲ. ಚೀನಾದ ಪೈಪೋಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ದೇಶದ ಆರ್ಥಿಕತೆ ಉನ್ನತ ಮಟ್ಟ ತಲುಪಿಸಿದ್ದೇವೆ ಎಂದರು.
ಅಮೆರಿಕನರು ತಮ್ಮ ಅಗತ್ಯ ವಸ್ತುಗಳನ್ನು ಕೊಳ್ಳಲು ಹರಸಾಹಸ ಪಡುವಂತಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್, ನಮ್ಮ ಆಡಳಿತದಲ್ಲಿ ಯಾವುದೇ ತೊಂದರೆಯಾಗಿಲ್ಲ. ಜನರು ಅವರ ಅತ್ಯಗತ್ಯವಾದ ವಸ್ತುಗಳನ್ನು ಕೊಳ್ಳಲು ಯಾವುದೇ ತೊಂದರೆಯಾಗಲಿಲ್ಲ. ಬೈಡನ್ ಸರ್ಕಾರದಲ್ಲಿ ಜನರು ತಮ್ಮ ಅಗತ್ಯ ವಸ್ತುಗಳನ್ನು ಕೊಳ್ಳಲೂ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಅಗತ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಇಳಿಸಿದ್ದೇವೆ. ಅಷ್ಟೇ ಅಲ್ಲ, ವೈದ್ಯಕೀಯ ಸೌಲಭ್ಯಗಳು, ಅಗತ್ಯ ಔಷಧಿಗಳ ಮೇಲಿನ ತೆರಿಗೆಯನ್ನು ಇಳಿಸಿ ಅವು ಜನಸಾಮಾನ್ಯರಿಗೆ ಸುಲಭವಾಗಿ ಲಭ್ಯವಾಗುವಂತೆ ನೋಡಿಕೊಂಡೆವು ಎಂದಿದ್ದಾರೆ.
ಅಮೆರಿಕದಲ್ಲಿ ವಲಸಿಗರಿಗೆ ಸಿಗುವ ಉದ್ಯೋಗಾವಕಾಶಗಳ ಬಗೆಗಿನ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೇಳಲಾದ ಪ್ರಶ್ನೆಗೆ ಇಬ್ಬರೂ ಉತ್ತರಿಸಿದರು. ಕಮಲಾ ಹ್ಯಾರಿಸ್ ಅವರು ಅಮೆರಿಕದ ಬೆಳವಣಿಗೆಯಲ್ಲಿ ಅನ್ಯ ದೇಶಗಳಿಂದ ಬಂದವರ ಕೊಡುಗೆಯೂ ಸೇರಿದೆ. ಆದರೆ, ಅವರ ಉದ್ಯೋಗಗಳನ್ನು ಕಿತ್ತುಕೊಂಡು ಅವರು ಜಾಗ ಖಾಲಿವಂತೆ ಮಾಡಿದ್ದು, ಮತ್ಯಾರೂ ಅಮೆರಿಕಕ್ಕೆ ಬಾರದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಟ್ರಂಪ್ ಸರ್ಕಾರ ಜಾರಿಗೊಳಿಸಿತ್ತು ಎಂದು ಆರೋಪಿಸಿದರು. ಟ್ರಂಪ್, ಎಲ್ಲೆಲ್ಲಿ ಅಪಾರವಾದ ಉದ್ಯೋಗವಕಾಶಗಳು ಇವೆಯೋ ಅಲ್ಲೆಲ್ಲಾ ನಾವು ಯಾರ ಕೆಲಸವನ್ನೂ ಕಿತ್ತುಕೊಂಡಿಲ್ಲ. ಆದರೆ, ಬೈಡನ್ ಸರ್ಕಾರದ ಎಲ್ಲರನ್ನೂ ಬಿಟ್ಟುಕೊಳ್ಳುವ ನೀತಿಯಿಂದಾಗಿ ಅಮೆರಿಕದಲ್ಲೀಗ ಅರಾಜಕತೆ ಉಂಟಾಗಿದೆ. ನಮ್ಮವರು ಉದ್ಯೋಗಕ್ಕೆ ಅಲೆಯುವಂತಾಗಿದೆ ಎಂದು ಆರೋಪಿಸಿದರು. ಸದ್ಯ ಜನರು ಈ ಇಬ್ಬರೂ ನಾಯಕರ ಚರ್ಚೆಯನ್ನು ವೀಕ್ಷಿಸಿ, ಚರ್ಚಿಸುತ್ತಿದ್ದಾರೆ.