ಇತ್ತೀಚೆಗೆ ಅಪಘಾತಗಳ ಸಂಖ್ಯೆಗಳು ಹೆಚ್ಚಾಗುತ್ತಿದ್ದು, ಜನರು ಸಾವಿನ ಕದ ತಟ್ಟುತ್ತಿದ್ದಾರೆ. ಡ್ರಿಂಕ್ ಆಂಡ್ ಡ್ರೈವ್ ಸೇರಿದಂತೆ ಅತೀ ವೇಗ ಅಪಘಾತಕ್ಕೆ ಕಾರಣವಾಗುತ್ತಿವೆ. ಈ ಮಧ್ಯೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ.
ಸಿಲಿಕಾನ್ ಸಿಟಿ ಸುತ್ತಮುತ್ತ ಇರುವ ಹೆದ್ದಾರಿಗಳಲ್ಲಿಯೂ ಅತೀ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂಬುವುದನ್ನು ಅಂಕಿ-ಸಂಖ್ಯೆಗಳು ಬಹಿರಂಗ ಪಡಿಸುತ್ತಿವೆ. ಒಟ್ಟಾರೆ ರಾಜ್ಯದಲ್ಲಿನ ಅಂಕಿ- ಸಂಖ್ಯೆಗಳಲ್ಲಿ ಶೇ. 25ರಷ್ಟು ಪಾಲು ಬೆಂಗಳೂರು ಸುತ್ತಮುತ್ತಲಿನ ಹೆದ್ದಾರಿಗಳಲ್ಲಿ ಉಂಟಾದ ಅಪಘಾತಗಳದ್ದಾಗಿದೆ.
ಇತ್ತೀಚೆಗಷ್ಟೇ ಪೊಲೀಸ್ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಅಪಘಾತ ಸಂಖ್ಯೆ ಹಾಗೂ ಸಾವನ್ನಪ್ಪಿದವರ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಅಲ್ಲದೇ, ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನೂ ಮಾಡುತ್ತಿದೆ.
ಬೆಂಗಳೂರು ಸುತ್ತಮುತ್ತಲಿನ ಹೆದ್ದಾರಿಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಹೆಚ್ಚು ವೇಗದಿಂದ ಚಲಿಸುವುದು ಅಪಘಾತಕ್ಕೆ ಕಾರಣವಾಗುತ್ತಿದೆ. ಅಲ್ಲದೇ, ರಸ್ತೆಗಳು ಸಮರ್ಪಕವಾಗದೆ ಇರುವುದು ಮತ್ತು ಸಂಚಾರ ನಿಯಮ ಉಲ್ಲಂಘಿಸಿ ಸವಾರರು ಸಂಚರಿಸುತ್ತಿರುವುದು ಈ ಅಪಘಾತಗಳಿಗೆ ಕಾರಣವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಕಠಿಣ ನಿಯಮ ಜಾರಿಗೊಳಿಸುತ್ತಿರುವುದರಿಂದಾಗಿ ಈ ವರ್ಷ ಸಾವಿನ ಸಂಖ್ಯೆಯ ಪ್ರಮಾಣ ಕಡಿಮೆಯಾಗಿರುವುದು ಸಂತಸದ ಸಂಗತಿ. ಡ್ರಿಂಕ್ ಅಂಡ್ ಡ್ರೈವ್ ಪ್ರಕರಣ, ಓವರ್ ಸ್ಪೀಡ್ ಸೇರಿದಂತೆ ಕಟ್ಟೆಚ್ಚರ ವಹಿಸಿದ್ದಕ್ಕೆ ಈ ವರ್ಷ ಸಾವಿನ ಸಂಖ್ಯೆಗಳು ಇಳಿಕೆಯಾಗಿವೆ.
ಮೂರು ವರ್ಷಗಳಲ್ಲಿ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆಯನ್ನು ಗಮನಿಸುವುದಾದರೆ, 2022ರಲ್ಲಿ 7996, 2023ರಲ್ಲಿ 8146, 2024ರಲ್ಲಿ 7596 ಜನರು ಅಪಘಾತದಿಂದಾಗಿ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬೆಂಗಳೂರು ನಗರದಲ್ಲಿ 564, ತುಮಕೂರು ಜಿಲ್ಲೆಯಲ್ಲಿ 470, ಬೆಂಗಳೂರು ಗ್ರಾಮಾಂತರದಲ್ಲಿ 454, ಬೆಳಗಾವಿ ಜಿಲ್ಲೆಯಲ್ಲಿ 450 ಜನರು ಅಪಘಾತಕ್ಕೆ ಬಲಿಯಾಗಿದ್ದರು. ಹೀಗಾಗಿ ವಾಹನ ಸವಾರರು ಎಚ್ಚರಿಕೆಯಿಂದ ರಸ್ತೆಯ ನಿಯಮಗಳನ್ನು ಪಾಲಿಸಿ ವಾಹನ ಚಲಿಸಬೇಕೆಂದು ಪೊಲೀಸರು ಮನವಿ ಮಾಡುತ್ತಿದ್ದಾರೆ.