ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಬಿಡುಗಡೆಯಾಗಿ 25 ದಿನಗಳು ಕಳೆದಿದ್ದು, ಚಂದನವನದ ಅಂಗಳದಲ್ಲಿ ಚಿತ್ರ ಭಾರೀ ಸದ್ದು ಮಾಡುತ್ತಿದೆ.
ಗಣೇಶ್ ನಟನೆಯ ಈ ಚಿತ್ರ ಆಗಸ್ಟ್ 15ರಂದು ತೆರೆ ಕಂಡಿದೆ. ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಸೃಷ್ಟಿಸಿದ್ದು, ಸೊರಗಿ ಮಂಕಾಗಿ ಹೋಗಿದ್ದ ಕನ್ನಡ ಚಿತ್ರರಂಗಕ್ಕೆ ಹೊಸ ಕಳೆ ಹಾಗೂ ಚೈತನ್ಯ ನೀಡಿದೆ. ಅಲ್ಲದೇ, ಹಲವು ದಿನಗಳ ನಂತರ ಗೋಲ್ಡನ್ ಸ್ಟಾರ್ ಗಿರಿಗೆ ದೊಡ್ಡ ಮುಕುಟ ನೀಡಿದಂತಾಗಿದೆ.
ಈ ಸಿನಿಮಾದ ಮೂಲಕ ನಟ ಗಣೇಶ್ ಭರ್ಜರಿಯಾಗಿ ಗೆದ್ದಿದ್ದಾರೆ. ಈ ಚಿತ್ರ ಈಗ 25ನೇ ದಿನಗಳನ್ನು ಪೂರೈಸಿದೆ. ಆ ಪ್ರಯುಕ್ತ ತಂಡ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಹೀಗಾಗಿ ಚಿತ್ರದ ಕಲೆಕ್ಷನ್ ಬಗ್ಗೆ ಮಾತುಗಳು ಕೇಳಿ ಬರುತ್ತಿವೆ.
ಸೆಪ್ಟೆಂಬರ್ 8ರಂದು ಒಂದೇ ದಿನ ಈ ಚಿತ್ರ ಬರೋಬ್ಬರಿ 56 ಲಕ್ಷ ರೂ. ಗಳಿಕೆ ಮಾಡಿತ್ತು ಎನ್ನಲಾಗಿದೆ. ಚಿತ್ರ ಪ್ರದರ್ಶನ ಉತ್ತಮವಾಗಿಯೇ ಸಾಗುತ್ತಿರುವುದರಿಂದಾಗಿ ಚಿತ್ರ ತಂಡ ಸಂತಸ ವ್ಯಕ್ತಪಡಿಸುತ್ತಿದೆ.
‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ಭಾನುವಾರ 25ನೇ ದಿನಕ್ಕೆ ಕಾಲಿಟ್ಟಿದೆ. ಈ ಸಿನಿಮಾ ಭಾನುವಾರವೂ ಒಳ್ಳೆಯ ಕಲೆಕ್ಷನ್ ಮಾಡಿದೆ. ಇಲ್ಲಿಯವರೆಗೆ ಈ ಚಿತ್ರ 18.87 ಕೋಟಿ ರೂ. ಗಳಿಸಿದೆ ಎಂದು ತಿಳಿದು ಬಂದಿದೆ.
ಹೀಗಾಗಿ ಕನ್ನಡದ ಈ ಚಿತ್ರ ಗೆದ್ದಿದೆ ಎಂದು ಸಿನಿಮಾ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಈ ಚಿತ್ರಕ್ಕೆ ಥಿಯೇಟರ್ನ ಜೊತೆಗೆ ಟಿವಿ ಹಕ್ಕು, ಒಟಿಟಿ ಹಕ್ಕಿನಿಂದಲೂ ಒಳ್ಳೆಯ ಆದಾಯ ಹರಿದು ಬಂದಿದೆ. ಹೀಗಾಗಿ ನಿರ್ಮಾಪಕರಿಗೆ ದೊಡ್ಡ ಲಾಭವೇ ಆಗಿದೆ. ಬುಕ್ ಮೈ ಶೋನಲ್ಲೂ ‘ಕೃಷ್ಣಂ ಪ್ರಣಯ ಸಖಿ’ ಚಿತ್ರಕ್ಕೆ ಒಳ್ಳೆಯ ರೇಟಿಂಗ್ ಸಿಕ್ಕಿದೆ.
ಈ ಸಿನಿಮಾಗೆ 16 ಸಾವಿರ ಮಂದಿ ರೇಟಿಂಗ್ ನೀಡಿದ್ದು, 8.6 ರೇಟಿಂಗ್ ದೊರೆತಿದೆ. ಹೀಗಾಗಿ ಅಭಿಮಾನಿಗಳು ಚಿತ್ರಮಂದಿರದತ್ತ ಬಂದು ಚಿತ್ರ ವೀಕ್ಷಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗಣೇಶ್, ಮಾಳವಿಕಾ ನಾಯರ್, ಶರಣ್ಯಾ ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ.