ನವದೆಹಲಿ: ಆಧಾರ್ ಮಾದರಿಯಲ್ಲಿ ರೈತರಿಗೆ ವಿಶಿಷ್ಟ ಗುರುತಿನ ಕಾರ್ಡ್ ನೀಡುವ ಯೋಜನೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ, ಅಕ್ಟೋಬರ್ ಮೊದಲ ವಾರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ಈಗ ನೋಂದಣಿ ನಡೆಸುವ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಕಲೆ ಹಾಕಲಾಗುತ್ತಿದೆ. ಮುಂದಿನ ಮಾರ್ಚ್ ಅಂತ್ಯದ ವೇಳೆಗೆ ಐದು ಕೋಟಿ ರೈತರನ್ನು ನೋಂದಾಯಿಸಬೇಕು ಎನ್ನುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2,817 ಕೋಟಿ ರೂ. ವೆಚ್ಚದೊಂದಿಗೆ ‘ಡಿಜಿಟಲ್ ಅಗ್ರಿಕಲ್ಚರ್ ಮಿಷನ್’ಗೆ ಅನುಮೋದನೆ ನೀಡಿದೆ. ಡಿಜಿಟಲೀಕರಣಕ್ಕಾಗಿ ಗುರುತಿನ ಚೀಟಿ ನೀಡುವ ಯೋಜನೆ ರೂಪಿಸಲಾಗಿದೆ. ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ವಿಶಿಷ್ಟ ಕಾರ್ಡ್‌ಗೆ ನೋಂದಣಿ ಯೋಜನೆ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದನ್ನು 19 ರಾಜ್ಯಗಳಿಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಗುರುತಿನ ಕಾರ್ಡ್ ನಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾ ಲಿಂಕ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
‘ರೈತರ ರಿಜಿಸ್ಟ್ರಿ’ ರೂಪಿಸಲಾಗುತ್ತದೆ. ಈಗ ಸರಕಾರದ ಬಳಿ ಇರುವ ದತ್ತಾಂಶಗಳು ರಾಜ್ಯಗಳು ಒದಗಿಸುವ ಬೆಳೆ ವಿವರ, ಕೃಷಿ ಜಮೀನು ಮಾಹಿತಿ ಮಾತ್ರ ಇದೆ. ಆದರೆ ವೈಯಕ್ತಿಕವಾಗಿ ರೈತರ ವಿವರಗಳಿಲ್ಲ. ಈ ಅಂತರವನ್ನು ನಿವಾರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದ್ದಾರೆ.