ಬೆಂಗಳೂರು: ಶಾಲೆಗಳು ಆರಂಭವಾಗಿ ಅರ್ಧ ವರ್ಷವೇ ಮುಗಿಯುತ್ತಿದೆ. ಆದರೂ ಬಹುತೇಕ ಸರ್ಕಾರಿ ಶಾಲೆಗಳಿಗೆ ಮಾತ್ರ ಪುಸ್ತಕ ಕೈ ಸೇರಿಲ್ಲ. ಇದರಿಂದಾಗಿ ಪಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪ್ರಸಕ್ತ ಸಾಲಿನಿಂದ ಕನ್ನಡ ಸೇರಿದಂತೆ ಇನ್ನಿತರ ಮಾಧ್ಯಮದೊಂದಿಗೆ ಆಂಗ್ಲ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ.
75ಕ್ಕೂ ಅಧಿಕ ಮಕ್ಕಳ ದಾಖಲಾತಿ ಇರುವ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹಾಲಿ ಇರುವ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮದಲ್ಲಿ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ, ಪಠ್ಯ ಪುಸ್ತಕಗಳು ಮಾತ್ರ ಕೈ ಸೇರಿಲ್ಲ. ಹೀಗಾಗಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಏನು ಪಾಠ ಮಾಡಬೇಕು? ಎಂಬುವುದೇ ಗೊತ್ತಾಗುತ್ತಿಲ್ಲ. ಮಕ್ಕಳದ ಪರಿಸ್ಥಿತಿಯಂತೂ ಹೇಳತೀರದಾಗಿದೆ.
ಆಂಗ್ಲ-ಮಾಧ್ಯಮ ವಿಭಾಗಗಳನ್ನು ಪರಿಚಯಿಸಿದ 1,419 ಶಾಲೆಗಳಿಗೆ ಇನ್ನೂ ಕೂಡ ಪಠ್ಯಪುಸ್ತಕಗಳು ಸಿಕ್ಕಿಲ್ಲ. ಈ ಮಧ್ಯೆ ಇನ್ನೂ 373 ಶಾಲೆಗಳಲ್ಲಿ ಇಂಗ್ಲಿಷ್-ಮಾಧ್ಯಮ ವಿಭಾಗಗಳನ್ನು ಮಂಜೂರು ಮಾಡಲು ಸರ್ಕಾರ ಮುಂದಾಗಿದೆ.


















