ಬೆಂಗಳೂರು: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಬಿಗ್ ಬಾಸ್ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ಕಿಚ್ಚ ಸುದೀಪ್ ಈ ಬಾರಿ ಬಿಗ್ ಬಾಸ್ ಆಗಿ ಮಿಂಚಲ್ಲ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಈ ಜನಪ್ರಿಯ ಶೋಗಾಗಿ ಈಗಾಗಲೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ನಿಲ್ಲಿಸುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಪ್ರೊಮೋ ಕೂಡ ಬಿಡುಗಡೆಯಾಗಿದೆ. ಈ ಪ್ರೋಮೊ ನೋಡಿದವರಿಗೆ ಸುದೀಪ್ ಕಾರ್ಯಕ್ರಮ ನಡೆಸಿ ಕೊಡುತ್ತಾರಾ? ಅಥವಾ ಇಲ್ಲವಾ? ಎಂಬ ಬಗ್ಗೆ ಅನುಮಾನ ಮೂಡುತ್ತಿದೆ.
ಸುದೀಪ್ ಈ ಬಾರಿಯೂ ಕಾಣಿಸಲಿದ್ದಾರೆ ಎಂದು ಕಾಯುತ್ತಿದ್ದವರಿಗೆ ಈಗ ಶಾಕ್ ಎದುರಾಗಿದೆ. ಈ ಪ್ರಶ್ನೆ ಹುಟ್ಟು ಹಾಕಿರುವ ಪ್ರೋಮೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ ಪ್ರೋಮೋದಲ್ಲಿ ಕೇವಲ ಲೋಗೋ ಇತ್ತು. ಹೊಸ ಸೀಸನ್ ಶೀಘ್ರವೇ ಆರಂಭ ಆಗಲಿದೆ ಎಂದು ಬರೆಯಲಾಗಿತ್ತು. #KicchaSudeep ಎಂದು ಬರೆಯೂವ ಮೂಲಕವಾಗಿ ಎಲ್ಲರಿಗೂ ಶಾಕ್ ನೀಡಲಾಗಿತ್ತು. ಹೀಗಾಗಿ ಕಿಚ್ಚ ಈ ಬಾರಿಯೂ ಅಬ್ಬರಿಸಲಿದ್ದಾರೆ. ಸ್ಪರ್ಧಿಗಳನ್ನು ತರಾಟೆಗೆ ತೆಗೆದುಕೊಂಡು, ಕಿಚಾಯಿಸುತ್ತಾರೆ ಎಂದೇ ಎಲ್ಲರೂ ಸಂತಸ ಪಟ್ಟಿದ್ದರು.
ಆದರೆ, ಈಗ ಪ್ರೋಮೋದ ಕ್ಯಾಪ್ಶನ್ ಎಡಿಟ್ ಮಾಡಲಾಗಿದ್ದು, ಸುದೀಪ್ #KicchaSudeep ಹ್ಯಾಶ್ ಟ್ಯಾಗ್ ಕಾಣೆಯಾಗಿದೆ. ಬಿಗ್ ಬಾಸ್ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಇನ್ ಸ್ಟ್ರಾಗ್ರಾಮ್ ನಲ್ಲಿ ಪಿನ್ ಮಾಡಿ ಇಟ್ಟಿದೆ. ಇದರಿಂದ ಸಂಶಯಗೊಂಡ ಅಭಿಮಾನಿಗಳು ಕಿಚ್ಚ ಸುದೀಪ್ ಕಾರ್ಯಕ್ರಮ ನಡೆಸಿ ಕೊಡಲ್ವಾ? ಎಂದು ಪ್ರಶ್ನಿಸುತ್ತಿದ್ದಾರೆ.


















