ಬೆಳಗಾವಿ: ರಾಜ್ಯ ಸರ್ಕಾರವು ಭಾಗ್ಯಲಕ್ಷ್ಮೀ ಬಾಂಡ್ ಪಡೆದವರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಈ ಮೂಲಕ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದರೂ ಫಲಾನುಭವಿಗಳಿಗೆ ಮಾತ್ರ ಯಾವುದೇ ತೊಂದರೆ ಆಗದಂತೆ ಸರ್ಕಾರ ನೋಡಿಕೊಳ್ಳುತ್ತಿದೆ.
2 ದಿನಗಳಿಂದ ಬಾಂಡ್ ಮೆಚ್ಯುರಿಟಿ ಆದ ಕುರಿತು ಸರ್ಕಾರ ಲೆಕ್ಕ ಮಾಡುತ್ತಿದೆ. ಅಲ್ಲದೇ, ಎಷ್ಟು ಜನರ ಬಾಂಡ್ ಮೆಚ್ಯುರಿಟಿ ಆಗಿದೆಯೋ ಅಷ್ಟು ಜನರಿಗೆ ಹಣ ಕೊಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾಗ್ಯಲಕ್ಷ್ಮೀ ಎಂದು ಹಿಂದಿನ ಸರ್ಕಾರ ಜಾರಿ ಮಾಡಿತ್ತು. ಈಗ ಅದರ ಹೆಸರು ಸುಕನ್ಯಾ ಸಮೃದ್ಧಿ ಯೋಜನೆಯಾಗಿದೆ. ಈ ಹಿಂದೆ ಎಲ್ ಐಸಿ ಅವರು ಬಾಂಡ್ ಕೊಡುತ್ತಿದ್ದರು. ಈಗ ಅಂಚೆ ಕಚೇರಿಯಿಂದ ಬಾಂಡ್ ಕೊಡಲಾಗುತ್ತಿದೆ ಎಂದು ಹೇಳಿದ್ದಾರೆ.
ಹೆಣ್ಣುಮಗು ಹುಟ್ಟಿದ ಕೂಡಲೇ ಇಂತಿಷ್ಟು ಹಣ ಇಡಲಾಗುತ್ತದೆ. ಭಾಗ್ಯಲಕ್ಷ್ಮೀ ಹೆಸರು ಬದಲಾಗಿರಬಹುದು. ಆದರೆ ಯೋಜನೆ ಒಂದೇ ಆಗಿದೆ. 19 ವಯಸ್ಸಿಗೆ ವಿದ್ಯಾಭ್ಯಾಸಕ್ಕೆ ಬೇಕಾದರೆ ಒಂದೂವರೆ ಲಕ್ಷ ಕೊಡುತ್ತೇವೆ. 21 ವಯಸ್ಸಿಗೆ ಬೇಕಾದರೆ 1 ಲಕ್ಷ 80 ಸಾವಿರ ರೂ. ಹಣ ಕೊಡುತ್ತೇವೆ. ಈಗ 2 ಲಕ್ಷ ಫಲಾನುಭವಿಗಳಿಗೆ ಹಣ ನೀಡಲು ತಯಾರಿ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.