ನಟ ವಿನೋದ್ ರಾಜ್ ಅವರು ತಮ್ಮ ತಾಯಿಯೊಂದಿಗೆ ಸೇರಿಕೊಂಡು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಿರುವುದು ಇಡೀ ನಾಡಿಗೆ ತಿಳಿದ ವಿಷಯ. ಆದರೆ, ಈಗ ಸರ್ಕಾರ ಹಾಗೂ ಜನಪ್ರತಿನಿಧಿಗಳು ಮಾಡದ ಕೆಲಸವನ್ನು ಮಾಡಿ, ಜನರ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ.
ಮಳೆ ಬಂದರೆ ಸಾಕು ಬೆಂಗಳೂರು ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿನ ರಸ್ತೆಗಳಲ್ಲಿ ಗುಂಡಿಗಳದ್ದೇ ಚಿಂತೆಯಾಗಿ ಬಿಟ್ಟಿರುತ್ತದೆ. ರಸ್ತೆಗಳಲ್ಲಿ ಗುಂಡಿಗಳಿವೆಯೋ? ಗುಂಡಿಗಳಲ್ಲಿ ರಸ್ತೆ ಇದೆಯೋ? ಎನ್ನುವಷ್ಟರ ಮಟ್ಟಿಗೆ ರಸ್ತೆಯ ಸ್ಥಿತಿ ಆಗಿ ಬಿಟ್ಟಿರುತ್ತದೆ. ಹೀಗಾಗಿ ಅದೆಷ್ಟೋ ಬಾರಿ ಮುಂಗಾರು ಮಳೆ ಆರಂಭಕ್ಕೂ ಮುನ್ನವೇ ತಗ್ಗು- ಗುಂಡಿಗಳನ್ನು ಮುಚ್ಚಲು ಸರ್ಕಾರ ಸೂಚಿಸಿದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿರುತ್ತದೆ. ಆದರೆ, ಸದಾ ಜನರ ಯೋಗಕ್ಷೇಮದ ಕುರಿತು ಚಿಂತಿಸುತ್ತಿರುವ ವಿನೋದ್ ರಾಜ್ ತಾವೇ ಸ್ವತಃ ತಮ್ಮ ಸ್ವಂತ ಖರ್ಚಿನಲ್ಲಿ ಬೆಂಗಳೂರಿನ ನೆಲಮಂಗಲ- ದೊಡ್ಡಬಳ್ಳಾಪುರ ರಸ್ತೆಯಲ್ಲಿನ ತಗ್ಗು- ಗುಂಡಿಗಳನ್ನು ಮುಚ್ಚಿಸುವ ಕಾರ್ಯ ಮಾಡಿದ್ದಾರೆ.
ತಾವೇ ಮುಂದೆ ನಿಂತು ಮಳೆಯಿಂದಾಗಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿಸಿ, ವಾಹನ ಸವಾರರಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಇದರಿಂದಾಗಿ ಹತ್ತಾರು ಜೀವ ಉಳಿಸಿದ ಮಹಾನ್ ಕಾರ್ಯ ಅವರಿಂದ ನಡೆಯುತ್ತಿದೆ. ಇದನ್ನು ಕಂಡು ಅಲ್ಲಿ ಚಲಿಸುತ್ತಿದ್ದ ವಾಹನ ಸವಾರರು ಕೃತಜ್ಞತೆ ಸಲ್ಲಿಸಿ ಮುಂದೆ ನಡೆಯುತ್ತಿದ್ದಾರೆ. ಈ ಹಿಂದೆಯೂ ಕೂಡ ತಗ್ಗು- ಗುಂಡಿಗಳನ್ನು ಮುಚ್ಚಿಸುವ ಕಾರ್ಯವನ್ನು ವಿನೋದ್ ರಾಜ್ ಮಾಡಿದ್ದರು.
ತಾಯಿ ಲೀಲಾವತಿ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಮಗ ವಿನೋದ್ ರಾಜ್ ನಡೆಯುತ್ತಿರುವುದು ಸಂತಸದ ಸಂಗತಿ. ತಾಯಿಯೊಂದಿಗೆ ಸೇರಿ ವಿನೋದ್ ರಾಜ್ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದರು. ಸೋಲದೇವನಹಳ್ಳಿ ಗುಡ್ಡದಲ್ಲಿ ಕೃಷಿ ಮಾಡುವುದರ ಮೂಲಕ ಛಲ ಇದ್ದರೆ ಏನನ್ನಾದರೂ ಸಾಧಿಸಬಹುದು ಎಂಬುವುದಕ್ಕೆ ಸಾಕ್ಷಿಯಾಗಿ ನಿಂತಿದ್ದರು.
ಆನಂತರ ಆ ಭಾಗದ ಪಶುಗಳಿಗಾಗಿ ಪಶು ಆರೋಗ್ಯ ಕೇಂದ್ರ, ಬಡವರ ಅನುಕೂಲಕ್ಕಾಗಿ ಸಾರ್ಜಜನಿಕ ಆರೋಗ್ಯ ಕೇಂದ್ರ ತೆರೆದು ಜನರ ಬದುಕಿಗೆ ಆಶಾ ಕಿರಣವಾಗಿದ್ದರು. ಬದುಕಿನಲ್ಲಿ ನೊಂದವರನ್ನು ಕಂಡರೆ, ಬೆನ್ನೆಲುಬಾಗಿ ತಾಯಿ ಲೀಲಾವತಿ ಹಾಗೂ ವಿನೋದ್ ರಾಜ್ ನಿಲ್ಲುತ್ತಿದ್ದರು. ಸದ್ಯ ತಾಯಿ ಲೀಲಾವತಿ ಬರೀ ವಿನೋದ್ ರಾಜ್ ಅಷ್ಟೇ ಅಲ್ಲ, ಅವರನ್ನು ಪ್ರೀತಿಸುತ್ತಿದ್ದ ಕನ್ನಡಿಗರನ್ನೂ ಬಿಟ್ಟು ದೂರ ಹೋಗಿದ್ದಾರೆ. ಆದರೆ, ವಿನೋದ್ ರಾಜ್ ಮಾತ್ರ ತಾಯಿ ಹಾಕಿಕೊಟ್ಟ ಆದರ್ಶಗಳನ್ನು ಬಿಟ್ಟಿಲ್ಲ. ಸದಾ ಜನರ ಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಅನಾರೋಗ್ಯದಿಂದಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅನಾರೋಗ್ಯದ ಮಧ್ಯೆಯೂ ರಸ್ತೆಯಲ್ಲಿ ನಿಂತು, ತಗ್ಗು-ಗುಂಡಿಗಳನ್ನು ಮುಚ್ಚಿಸುತ್ತಿದ್ದು, ಅವರ ಮಹಾನ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
