ಬೆಂಗಳೂರು : 15 ದಿನಗಳಲ್ಲಿ ಗುಂಡಿ ಮುಚ್ಚದಿದ್ದರೆ ಅದೆಷ್ಟು ಜನ ಅಧಿಕಾರಿಗಳು ಸಸ್ಪೆಂಡ್ ಆಗುತ್ತಾರೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ವಾರ್ನಿಂಗ್ ಮಾಡಿದ್ದಾರೆ.
ಈ ವಿಷಯವಾಗಿ ಮಾತನಾಡಿದ ಅವರು, ಹಿರಿಯ ಅಧಿಕಾರಿಗಳು, ಮುಖ್ಯ ಇಂಜನೀಯರ್ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿನ ಗುಂಡಿ ಮುಚ್ಚುವ ಕುರಿತು ಸಭೆ ನಡೆಸಿ, 15 ದಿನಗಳ ಗಡುವು ನೀಡಿದ್ದೇನೆ. ಹೀಗಾಗಿ ಅಧಿಕಾರಿಗಳು ಗುಂಡಿ ಮುಚ್ಚಲು ಮೊದಲ ಆದ್ಯತೆ ನೀಡಬೇಕು. ಒಂದು ವೇಳೆ ಅಧಿಕಾರಿಗಳು ವಿಫಲವಾದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಈ ತಿಂಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಕಂಟ್ರೋಲ್ ರೂಂ ಪ್ರತಿಯೊಂದನ್ನು ಗಮನಿಸುತ್ತಿರಬೇಕು. ನೀರು ನುಗ್ಗುವುದು, ಅವಾಂತರಗಳು ಆಗುವುದನ್ನು ತಡೆಯಬೇಕು. ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಎತ್ತಿನ ಹೊಳೆ ಯೋಜನೆಗೆ ಸದ್ಯ 19 ಟಿಎಂಸಿ ಅಡಿ ನೀರು ಸಿಗುತ್ತಿದ್ದು, ತಗ್ಗು ಪ್ರದೇಶದ ಇನ್ನಷ್ಟು ಹಳ್ಳಗಳಿಂದ ನೀರೆತ್ತುವ ಮೂಲಕ ಕೊರತೆ ಇರುವ 5 ಟಿಎಂಸಿ ಅಡಿ ನೀರನ್ನು ಒದಗಿಸಲಾಗುವುದು. ಈ ಯೋಜನೆಯನ್ನು 2026-27ಕ್ಕೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ.
ವಾರ್ಷಿಕ 19 ಟಿಎಂಸಿ ಅಡಿ ನೀರು ಸಿಗುತ್ತಿದೆ. ಏಳು ಜಿಲ್ಲೆಗಳಿಗೆ ಕುಡಿಯಲು ಬೇಕಿರುವುದು 14 ಟಿಎಂಸಿ ಅಡಿ ನೀರು. ಕುಡಿಯುವ ನೀರಿಗೆ ಯಾವುದೇ ಕೊರತೆಯಾಗುವುದಿಲ್ಲ. ಅದರ ಜತೆಗೆ ಕೆರೆಗಳಿಗೆ ನೀರು ತುಂಬಿಸಲು ನೀರು ಅಗತ್ಯವಿದೆ. 24 ಟಿಎಂಸಿ ಅಡಿ ನೀರು ಬೇಕಾಗುತ್ತದೆ. 5 ಟಿಎಂಸಿ ಅಡಿ ನೀರು ಕಡಿಮೆ ಇದೆ. ಇದನ್ನು ಸರಿದೂಗಿಸಲು ಸಮೀಕ್ಷೆ ನಡೆಯುತ್ತಿದೆ ಎಂದು ಹೇಳಿದ್ದಾರೆ.