ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಆರೋಪಿಗಳ ವಿರುದ್ಧ ಈಗಾಗಲೇ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಈ ಮಧ್ಯೆ ಈಗ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಚಾರ್ಜ್ ಶೀಟ್ ಸಲ್ಲಿಕೆಗೂ ಮುನ್ನ ಪವಿತ್ರಾಗೌಡ ಹಾಗೂ ಇನ್ನಿತರ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ಆ ಅರ್ಜಿಗಳನ್ನು ವಜಾ ಮಾಡಿತ್ತು. ಈಗ ದೋಷಾರೋಪ ಪಟ್ಟಿ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಜಾಮೀನು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಪತ್ನಿ ವಿಜಯಲಕ್ಷ್ಮೀ, ದರ್ಶನ್ ಭೇಟಿಗೆ ಜೈಲಿಗೆ ಬಂದಿದ್ದ ಸಂದರ್ಭದಲ್ಲಿ ಬೇಲ್ ವಿಚಾರವಾಗಿ ಚರ್ಚೆ ನಡೆದಿದೆ ಎನ್ನಲಾಗಿದೆ.
ಗುರುವಾರವಷ್ಟೇ ವಿಜಯಲಕ್ಷ್ಮೀ ಹಾಗೂ ದರ್ಶನ್ ಸಹೋದರ ದಿನಕರ್ ಭೇಟಿ ನೀಡಿದ್ದರು. ಈ ವೇಳೆ ಬೇಲ್ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ. ಇದಕ್ಕೂ ಮೊದಲು ದರ್ಶನ್ ಅವರು ದೂರವಾಣಿ ಮೂಲಕ ವಕೀಲರ ಜೊತೆ ಮಾತನಾಡಿದ್ದರು. ಈ ವೇಳೆ ಜಾಮೀನಿನ ವಿಚಾರವಾಗಿ ಚರ್ಚೆ ನಡೆದಿದೆ.
ವಿಜಯಲಕ್ಷ್ಮೀ ಜೊತೆ ವಕೀಲರು ಬೇಲ್ ಅರ್ಜಿ ಕಳುಹಿಸಿದ್ದರು. ವಕೀಲರ ಜೊತೆ ಮಾತುಕತೆ ನಡೆದ ನಂತರ ಬೇಲ್ ಅರ್ಜಿಗೆ ಸಹಿ ಹಾಕಿದ್ದರು. ವಿಜಯಲಕ್ಷ್ಮೀ ಹಾಗೂ ದಿನಕರ್ ಸಹಿ ಪಡೆದು ಹೋದ ನಂತರ ಜೈಲಿಗೆ ನೋಟರಿ ಬಂದಿದೆ. ಸರ್ಕಾರಿ ನೋಟರಿಯವರು ಜೈಲು ಅಧಿಕಾರಿಗಳ ಸಮ್ಮುಖದಲ್ಲಿ ಜಾಮೀನು ಅರ್ಜಿ ಹಾಗೂ ಅಫಿಡವಿಟ್ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.