ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ ಆರೋಪಿಗಳಿಗೆ ಆತಂಕ ಶುರುವಾಗಿದೆ. ಈ ಮಧ್ಯೆ ನಟ ದರ್ಶನ್ (Actor Darshan) ಹಾಗೂ ಪವಿತ್ರಾಗೌಡ ಫೋನ್ ಗಳು ಕೊನೆಗೂ ರಿಟ್ರೀವ್ ಆಗಿಲ್ಲ ಎಂದು ತಿಳಿದು ಬಂದಿದೆ. ಅವರಿಬ್ಬರ ಫೋನ್ ಗಳಲ್ಲಿ ಕೂಡ ಸೀಕ್ರೆಟ್ ಅಡಗಿದೆ ಎಂಬುವುದು ಪೊಲೀಸರ ಊಹೆಯಾಗಿದೆ.
ಹೈದರಾಬಾದ್ ಸಿಎಫ್ ಎಸ್ ಎಲ್ ನಲ್ಲಿದ್ದ ಇಬ್ಬರು ಆರೋಪಿಗಳ ಐಫೋನ್ ಗಳು ರಿಟ್ರೀವ್ ಆಗದೆ ಮರಳಿ ಬಂದಿವೆ. ಹೀಗಾಗಿ ಈ ಎರಡೂ ಐಫೋನ್ ಗಳನ್ನು ಗುಜರಾತ್ ಗೆ ಕಳುಹಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ. ಗುಜರಾತ್ ನ ಎಫ್ ಎಸ್ ಎಲ್ ಯೂನಿವರ್ಸಿಟಿಯಲ್ಲಿ ಆತ್ಯಾಧುನಿಕ ತಂತ್ರಜ್ಞಾನ, ಎಕ್ಪ್ಮೆಂಟ್ ಇದೆ. ಎಫ್ಎಸ್ಎಲ್ ತಜ್ಞರ ತಂಡದಿಂದ ಎರಡು ಐಫೋನ್ ಗಳ ರಹಸ್ಯ ಭೇದಿಸಲು ಈ ಮೂಲಕ ಚಿಂತನೆ ನಡೆದಿದೆ.
ಈ ಮಧ್ಯೆ ಸೆಪ್ಟೆಂಬರ್ 9ರಂದು ದರ್ಶನ್ ನ್ಯಾಯಾಂಗ ಅವಧಿ ಮುಕ್ತಾಯ ಆಗಲಿದೆ. ಅಂದು ಆರೋಪಿಗಳು ಕೋರ್ಟ್ ಗೆ ಹಾಜರಾಗಲಿದ್ದಾರೆ. ಅದೇ ದಿನ ಚಾರ್ಜ್ ಶೀಟ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಸೆಷನ್ಸ್ ಕೋರ್ಟ್ ಗೆ ವರ್ಗಾವಣೆ ಆಗಲಿದೆ. ಆನಂತರ ಕೇಸ್‌ಗೆ ಸಂಬಂಧಿಸಿದಂತೆ ಸ್ಕ್ರೂಟಿನಿ ಆಗಲಿದೆ. ಕೇಸ್ ಸ್ಕ್ರೂಟಿನಿ ಆದ ನಂತರ ಕೋರ್ಟ್‌ನಿಂದ ಪ್ರಕರಣಕ್ಕೆ ಸಿಸಿ ನಂಬರ್ ನೀಡಲಾಗುತ್ತದೆ. ಕೇಸ್‌ನ ಸಿಸಿ ನಂಬರ್ ಪಡೆದ ನಂತರ ಆರೋಪಿಗಳ ಪರ ವಕೀಲರಿಗೆ ಚಾರ್ಜ್ ಶೀಟ್ ಪ್ರತಿ ನೀಡಲಾಗುತ್ತದೆ. ಆರೋಪಿ ಪರ ವಕೀಲರು ಚಾರ್ಜ್ ಸೀಟ್ ಪ್ರತಿ ಕೈಗೆ ಸಿಕ್ಕ ನಂತರ, ಜಾಮೀನಿಗೆ ಅರ್ಜಿ ಸಲ್ಲಿಸಲು ಮುಂದಾಗಬಹುದು.
ಸೆಪ್ಟೆಂಬರ್ 9 ರ ನಂತರ ಜಾಮೀನಿಗೆ ಅರ್ಜಿ ಸಲ್ಲಿಸುವುದಕ್ಕೆ ದರ್ಶನ್, ಪವಿತ್ರ ಗೌಡ ಸೇರಿ ಉಳಿದ ಆರೋಪಿಗಳ ಪರ ವಕೀಲರು ಸಿದ್ಧತೆ ಮಾಡಿಕೊಳ್ಳಬಹುದು ಎನ್ನಲಾಗುತ್ತಿದೆ. ಈಗಾಗಲೇ ಹಲವರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಕೋರ್ಟ್ ವಜಾಗೊಳಿಸಿತ್ತು.