ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ 3,991 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಈ ಪ್ರಕರಣದಲ್ಲಿ ನಟ ದರ್ಶನ್ ಎ2 ಆಗಿದ್ದಾರೆ. ಎಫ್ ಐಆರ್ ನಲ್ಲಿ ದಾಖಲಿಸಿದಂತೆ ಪವಿತ್ರಾಗೌಡ ಎ1 ಆಗಿದ್ದಾರೆ. ದರ್ಶನ್ ವಿರುದ್ಧ ಚಾರ್ಜ್ ಶೀಟ್ ನಲ್ಲಿ ಗಂಭೀರ ಆರೋಪಗಳು ದಾಖಲಾಗಿವೆ. ಅಪಹರಣ ಮಾಡಿದ್ದು, ಹಲ್ಲೆ ಮಾಡಿದ್ದು, ಕೊಲೆ ನಡೆದ ನಂತರ ಅದನ್ನು ಮುಚ್ಚಿ ಹಾಕಲು ಹಣ ನೀಡಿದ್ದು ದರ್ಶನ್ ಎನ್ನುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಕೊಲೆ ನಡೆದ ಸ್ಥಳದಲ್ಲಿ ಇರುವುದು ಹಾಗೂ ಕೊಲೆಯ ನಂತರ ಸ್ಥಳದಿಂದ ಪರಾರಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ದರ್ಶನ್ ಬಟ್ಟೆ ಮತ್ತು ಶೂನಲ್ಲಿ ರೇಣುಕಾ ಸ್ವಾಮಿ ರಕ್ತ ಇರುವುದು ಪತ್ತೆ ಆಗಿದೆ. ಇದಕ್ಕೆ ಸಾಕ್ಷ್ಯಗಳು ಕೂಡ ಸಿಕ್ಕಿವೆ. ಇವುಗಳನ್ನೆಲ್ಲ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಕೊಲೆ ಮಾಡಲು ಮೂಲ ಕಾರಣ ಪವಿತ್ರಾಗೌಡ ಎನ್ನುವುದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಅಲ್ಲದೇ, ಹಲ್ಲೆ ನಡೆಸುವ ಸ್ಥಳದಲ್ಲಿ ಹಾಜರಿದ್ದರು ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿರುವುದು ಅಧಿಕೃತವಾಗಿ ದಾಖಲಾಗಿದೆ. ಸಿಸಿಟಿವಿಯಲ್ಲಿ ಪವಿತ್ರಾ ಗೌಡ ಸೆರೆ ಆಗಿದ್ದಾರೆ. ಪವಿತ್ರಾ ಗೌಡ ಮೊಬೈಲ್ ಕೃತ್ಯದ ಸ್ಥಳದಲ್ಲಿ ಆ್ಯಕ್ಟೀವ್ ಆಗಿತ್ತು. ಉಳಿದವರ ಪಾತ್ರದ ಬಗ್ಗೆಯೂ ಉಲ್ಲೇಖಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೆಷಲ್ ಕೋರ್ಟ್ ಅಥವಾ ತ್ವರಿತ ಕೋರ್ಟ್ ಗೆ ನೀಡಲು ಸರ್ಕಾರಕ್ಕೆ ಮನವಿ ಮಾಡಲು ಬೆಂಗಳೂರು ಪೊಲೀಸರು ನಿರ್ಧರಿಸಿದ್ದಾರೆ. ಇದಕ್ಕೆ ಸರ್ಕಾರ ಕೂಡ ಒಪ್ಪಿದರೆ, ಪ್ರಕರಣದ ಇತ್ಯರ್ಥ ಬೇಗ ಆಗಲಿದೆ.