ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಮೊದಲ ಸಭೆ ನಡೆಸಿದ್ದು, ಇದಕ್ಕೆ ರಾಜಮನೆತನ ವಿರೋಧ ವ್ಯಕ್ತಪಡಿಸಿದೆ.
ಸಿಎಂ ಸಿದ್ದರಾಮಯ್ಯ ಅವರು ಚಾಮುಂಡಿ ಬೆಟ್ಟ(Chamundi Hills) ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡುವುದಾಗಿ ಬಜೆಟ್ ನಲ್ಲಿ ಘೋಷಿಸಿದ್ದರು. ಅದರಂತೆ ಈಗ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪ್ರಾಧಿಕಾರ ರಚನೆ ಪ್ರಶ್ನಿಸಿ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ನ್ಯಾಯಾಲಯದ ಮೊರೆ ಹೋಗಿದ್ದರು.
ಚಾಮುಂಡೇಶ್ವರಿ ದೇವಾಲಯವು ನಮ್ಮ ಖಾಸಗಿ ಆಸ್ತಿ ಎಂದು ಹಕ್ಕೊತ್ತಾಯ ಮಂಡಿಸಿದ್ದರು. ಈ ಗೊಂದಲದ ಮಧ್ಯೆ ಸಿಎಂ ಪ್ರಾಧಿಕಾರದ ಮೊದಲ ಸಭೆ ನಡೆಸಿದ್ದಾರೆ. ಪ್ರಾಧಿಕಾರದ ವಿಚಾರವಾಗಿ ಹೈಕೋರ್ಟ್ ತಡೆ ನೀಡಿತ್ತು. ಆದರೆ, ನ್ಯಾಯಾಲಯ ತಡೆಯಾಜ್ಞೆ ತೆರವುಗೊಳಿಸಿದೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಾಗಿ ಸರ್ಕಾರ ವರ್ಸಸ್ ರಾಜಮನೆತನ ಎಂಬಂತಾಗಿ ಬಿಟ್ಟಿದೆ.
ಸಿಎಂ ಹೇಳಿಕೆಯನ್ನು ರಾಜಮನೆತನದವರು ಅಲ್ಲಗಳೆದಿದ್ದಾರೆ. ಈ ಸಭೆ ಕಾನೂನು ಬಾಹಿರ. ನಮಗೂ ಸಭೆಗೆ ಆಹ್ವಾನ ನೀಡಲಾಗಿತ್ತು. ಆದರೆ, ಇದು ಕಾನೂನುಬಾಹಿರ ಸಭೆ ಹಿನ್ನೆಲೆ ನಾವು ಭಾಗಿಯಾಗುವುದಿಲ್ಲ ಎಂದು ಹೇಳಿದ್ದಾರೆ.