ಹಾಸನ: ಮುಡಾ ಪ್ರಕರಣದ ಕೇಸ್ ನ್ನು ನಾನು ವಾದ ಮಾಡುತ್ತೇನೆ. ಕೇಸ್ ಗೆಲ್ಲದಿದ್ದರೆ ನಿಮ್ಮ ಮನೆಯಲ್ಲಿ ಜೀತ ಮಾಡುತ್ತೇನೆ ಎಂದು ಹಾಸನದಲ್ಲಿ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಪ್ರಕರಣದಲ್ಲಿ ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಈ ಕೇಸ್‌ನಲ್ಲಿ ಏನೂ ಆಗುವುದಿಲ್ಲ. ಮುಖ್ಯಮಂತ್ರಿಗಳು ತಪ್ಪಿತಸ್ಥರಲ್ಲ. ಅವರ ಪಾತ್ರ ಈ ಪ್ರಕರಣದಲ್ಲಿ ಇಲ್ಲ. ಅವರಿಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ ಎಂದು ಹೇಳಿದ್ದಾರೆ.
ದೇವರಾಜು ಎನ್ನುವವನು ಇಲ್ಲ, ಅವನಿಗೆ ಜಮೀನೇ ಬಂದಿಲ್ಲ. ನಕಲಿ ದಾಖಲಾತಿ ಕೊಟ್ಟಿದ್ದಾನೆ ಎಂದು ಟಿವಿಯಲ್ಲಿ ಪ್ರಸಾರವಾಗುತ್ತಿದೆ. ಆದರೆ ಅವನಿಗೆ ಅವನ ಮಕ್ಕಳು ಪಾಲು ಪಾರಿಕತ್ ಮಾಡಿಕೊಟ್ಟಿರುವ ದಾಖಲೆ ನನ್ನ ಹತ್ತಿರ ಇದೆ. ನೀವು ನನ್ನ ಚರ್ಚೆಗೆ ಕರೆದರೆ ನಾನು ದಾಖಲಾತಿ ಕೊಡುತ್ತೇನೆ. ನನಗೆ ವಾದ ಮಾಡಲು ಕೊಟ್ರೆ ನಾನೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ.
ಮುಡಾ ಹಗರಣದ ಬೆನ್ನಲ್ಲೇ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರಕಾರ, ಈಗ ಅಮಾನತು ಮಾಡಿದೆ.
ಮುಡಾ ಹಗರಣ ಮಧ್ಯಂತರ ಆದೇಶಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. ಮತ್ತೆ ವಿಚಾರಣೆಯನ್ನು ಸೆ. 9ಕ್ಕೆ ಮುಂದೂಡಲಾಗಿದೆ. ಸಿಎಂ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಎಜಿ ವಾದದ ನಂತರ ತಾವು ಸೆ.12ರಂದು ವಾದ ಮಂಡನೆ ಮಾಡುವುದಾಗಿ ಹೇಳಿದರು. ಆಗ ಜಡ್ಜ್, ‘‘ಪ್ರಕರಣದ ಸಂಪೂರ್ಣ ವಿಚಾರಣೆ ಸೆ.12ರಂದು ಮುಗಿಸೋಣ ಎಂದು ಹೇಳಿದರು.
ಅಲ್ಲದೇ, ಹಿಂದೆ ಪ್ರಾಸಿಕ್ಯೂಷನ್ ಅನುಮತಿ ಆಧರಿಸಿ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂಬ ಮಧ್ಯಂತರ ಆದೇಶವನ್ನು ವಿಸ್ತರಿಸಿ ವಿಚಾರಣೆ ಮುಂದೂಡಲಾಯಿತು. ಹೀಗಾಗಿ ಸಿಎಂಗೆ ಸೆ. 9ರವರೆಗೆ ನಿರಾಳತೆ ಸಿಕ್ಕಂತಾಗಿದೆ.