ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು, ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆಗೆ ಸಿದ್ಧತೆ ಮಾಡಿಕೊಂಡಿದ್ದು, ಕೆಲವು ಅಂಶಗಳು ಸ್ಫೋಟವಾಗಿವೆ.
ಈ ಪ್ರಕರಣದಲ್ಲಿ ಪೊಲೀಸರ ತನಿಖೆಯಿಂದ ಮೃತ ರೇಣುಕಾಸ್ವಾಮಿ ಪವಿತ್ರಾಗೌಡಗೆ ಅಶ್ಲೀಲ ಫೋಟೊಗಳನ್ನು ಕಳಿಸಿರುವುದು ದೃಢವಾಗಿದೆ. ಪವಿತ್ರಾಗೌಡ ಇನ್ಸ್ಟಾಗ್ರಾಮ್ ಅಕೌಂಟ್ ಗೆ ರೇಣುಕಾ ಸ್ವಾಮಿ ಬಳಸುತ್ತಿದ್ದ ಅಕೌಂಟ್ ನಿಂದ ಫೋಟೊ ಕಳಿಸಿದ್ದಾನೆ ಎನ್ನಲಾಗಿದೆ.
ರೇಣುಕಾಸ್ವಾಮಿ ಫೋಟೊ ಕಳಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಕಾಮಾಕ್ಷಿಪಾಳ್ಯ ಪೊಲೀಸರು ಇನ್ಸ್ಟಾಗ್ರಾಂಗೆ ಪತ್ರ ಬರೆದಿದ್ದರು. ಪೊಲೀಸರ ಮನವಿಗೆ ಸ್ಪಂದಿಸಿ ಮಾಹಿತಿ ಕೊಟ್ಟಿದ್ದಾರೆ. ಪವಿತ್ರಾಗೌಡಗೆ ಕಳುಹಿಸಿದ್ದ ಮೇಸೆಜ್ ಗಳು ಹಾಗೂ ಅಶ್ಲೀಲ ಫೋಟೊ ಬಗ್ಗೆ ಇನ್ಸ್ಟಾಗ್ರಾಂ ಖಚಿತಪಡಿಸಿದೆ. ಈ ಅಂಶ ಕೂಡ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ..
ಚಾರ್ಜ್ ಶೀಟ್ ನಲ್ಲಿ ರೇಣುಕಾಸ್ವಾಮಿ ಕೊಲೆಯ ಹಿಂದಿನ ಕೆಲವು ಸತ್ಯಗಳು ಬಹಿರಂಗವಾಗಿವೆ. ಆದರೆ, ಬಂಧಿತ ಮೂವರು ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿಲ್ಲ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆಯಾಗುತ್ತಿದ್ದಂತೆ ನಿಖಿಲ್ ನಾಯ್ಕ್, ಕೇಶವಮೂರ್ತಿ ಹಾಗೂ ಕಾರ್ತಿಕ್ ಈ ಮೂವರು ಆರಂಭದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಗೆ ಶರಣಾಗಿದ್ದರು. ಆದರೆ, ಕೊಲೆಯಲ್ಲಿ ಅವರ ಪಾತ್ರ ಇಲ್ಲ ಎನ್ನುವುದು ಈಗ ಬಹಿರಂಗವಾಗಿದೆ. ಆದರೆ, ಈ ಮೂವರ ಮೇಲೆ ಈಗ ಸಾಕ್ಷ್ಯ ನಾಶ ಮಾಡಿದ ಆರೋಪವನ್ನು ಪೊಲೀಸರು ಮಾಡಿದ್ದಾರೆ.
4,500 ಪುಟಗಳ ಒಟ್ಟು 22 ಪ್ರತಿಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಕೆಯಾಗಬಹುದು ಎನ್ನಲಾಗಿದೆ.