ಪ್ಯಾರಿಸ್: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತೀಯ ಆಟಗಾರರು ಪದಕ ಬೇಟೆ ಮುಂದುವರೆಸಿದ್ದಾರೆ. 5ನೇ ದಿನವಾಗಿರುವ ಸೋಮವಾರ ಭಾರತಕ್ಕೆ ಒಟ್ಟು 8 ಪದಕಗಳು ಒಲಿದು ಬಂದಿವೆ.
ಜಾವೆಲಿನ್ ಆಟಗಾರ ಸುಮಿತ್ ಅಂತಿಲ್ ಮತ್ತು ಬ್ಯಾಡ್ಮಿಂಟನ್ ಆಟಗಾರ ನಿತೇಶ್ ಕುಮಾರ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ನಿರೀಕ್ಷಿತ ಪ್ರದರ್ಶನ ನೀಡಿದ ಯೋಗೇಶ್ ಕಾಥುನಿಯಾ, ತುಳಸಿಮತಿ ಮುರುಗೇಸನ್ ಮತ್ತು ಸುಹಾಸ್ ಯತಿರಾಜ್ ಬೆಳ್ಳಿ ಪದಕ ಗೆದ್ದಿದ್ದಾರೆ.
ಪುರುಷರ ಎಫ್ 56 ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಯೋಗೇಶ್ ಕಾಥುನಿಯಾ ಗೆದ್ದ ಬೆಳ್ಳಿ ಪದಕದೊಂದಿಗೆ ಐದನೇ ದಿನ ಭಾರತ ತನ್ನ ಪದಕ ಬೇಟೆ ಆರಂಭಿಸಿತು. ಯೋಗೇಶ್ 42.22 ಮೀ. ದೂರಕ್ಕೆ ಡಿಸ್ಕ್ ಎಸೆಯುವ ಮೂಲಕ ಬೆಳ್ಳಿ ಗೆದ್ದ ಸಾಧನೆ ಮಾಡಿದರು. 2021ರ ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲೂ ಯೋಗೇಶ್ ಬೆಳ್ಳಿ ಗೆದ್ದಿದ್ದರು. ಆ ಬಾರಿಯೂ ಬೆಳ್ಳಿಗೆ ತೃಪ್ತಿ ಪಟ್ಟರು.
ಪುರುಷರ ಎಸ್‌ಎಲ್3 ವಿಭಾಗದ ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ನಿತೇಶ್ ಕುಮಾರ್ ಚಿನ್ನಕ್ಕೆ ಕೊರಳೊಡ್ಡಿದರು. ಬ್ರಿಟನ್ ನ ಡೇನಿಯೆಲ್ ಬೆಥೆಲ್ ರನ್ನು 21-14, 18-21, 23-21 ಅಂತರದ ಗೇಮ್ ಗಳಿಂದ ಮಣಿಸಿದ ನಿತೇಶ್ ಚಿನ್ನಕ್ಕೆ ಕೊರಳೊಡ್ಡಿದರು.
ಮಹಿಳೆಯರ ಎಸ್ ಯು5 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಮನಿಶಾ ರಾಮದಾಸ್ ಕಂಚು ಗೆದ್ದರು. 19 ವರ್ಷದ ಆಟಗಾರ್ತಿ ಅಧಿಕಾರಯುತ ಪ್ರದರ್ಶನ ನೀಡಿ ಡೆನ್ಮಾರ್ಕ್ ನ ಆಟಗಾರ್ತಿ ಕ್ಯಾಥರಿನ್ ರೋಸೆನ್ ಗ್ರೆನ್ ರನ್ನು 21-12, 21-8 ಅಂತರದಲ್ಲಿ ಮಣಿಸಿದರು. ಮಹಿಳಾ ಸಿಂಗಲ್ಸ್ ಎಸ್ ಯು5 ಸ್ಪರ್ಧೆಯ ಫೈನಲ್ ಭಾರತದ ತುಳಸಿಮತಿ ಮುರುಗೇಸನ್, ಹಾಲಿ ಚಾಂಪಿಯನ್ ಚೀನಾದ ಯಾಂಗ್ ಕಿಯಾಕ್ಸಿಯಾ ಎದುರು 17-21, 10-21 ಅಂತರದಲ್ಲಿ ಸೋತರೂ ಬೆಳ್ಳಿ ಗೆದ್ದರು.
ಸುಹಾಸ್ ಯತಿರಾಜ್, ಪುರುಷರ ಸಿಂಗಲ್ಸ್‌ನ ಎಸ್‌ಎಲ್4 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಫೈನಲ್ ನಲ್ಲಿ 9-21, 13-21 ಅಂತರದಿಂದ ಸೋಲು ಕಂಡು ಬೆಳ್ಳಿ ಗೆದ್ದರು. ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದಿದ್ದ ಭಾರತದ ಪ್ಯಾರಾ ಜಾವೆಲಿನ್ ಪಟು, ಈ ಬಾರಿ ಬೆಳ್ಳಿ ಗೆದ್ದರು. 70.59 ಮೀ ಜಾವೆಲಿನ್ ಎಸೆಯುವ ಮೂಲಕ ಸುಮಿತ್ ದಾಖಲೆಯೊಂದಿಗೆ ಚಿನ್ನಕ್ಕೆ ಕೊರಳೊಡ್ಡಿದರು.
ಮಿಶ್ರ ಕಾಂಪೌಂಡ್ ಆರ್ಚರಿ ಸ್ಪರ್ಧೆಯಲ್ಲಿ ಭಾರತದ ಶೀತಲ್ ದೇವಿ ಮತ್ತು ರಾಕೇಶ್ ಕುಮಾರ್ ಕಂಚಿನ ಪದಕ ಗೆದ್ದರು. ನಿತ್ಯಾಶ್ರೀ ಸಿವನ್ ಕಂಚು ಗೆದ್ದರು.
5ನೇ ದಿನ ಪದಕ ಗೆದ್ದ ಭಾರತೀಯ ಸಾಧಕರು…
ಗೋಲ್ಡ್ – ಸುಮಿತ್ ಅಂತಿಲ್ (ಜಾವೆಲಿನ್)
ಗೋಲ್ಡ್ – ನಿತೇಶ್ ಕುಮಾರ್ (ಬ್ಯಾಡ್ಮಿಂಟನ್)
ಸಿಲ್ವರ್ – ತುಳಸಿಮತಿ ಮುರುಗೇಸನ್ (ಬ್ಯಾಡ್ಮಿಂಟನ್)
ಸಿಲ್ವರ್ – ಯೋಗೇಶ್ ಕಾಥುನಿಯಾ (ಡಿಸ್ಕಸ್)
ಸಿಲ್ವರ್ – ಸುಹಾಸ್ ಯತಿರಾಜ್ (ಬ್ಯಾಡ್ಮಿಂಟನ್)
ಬ್ರಾನ್ಜ್ – ಮನಿಶಾ ರಾಮದಾಸ್ (ಬ್ಯಾಡ್ಮಿಂಟನ್)
ಬ್ರಾನ್ಜ್ – ಶೀತಲ್ ಮತ್ತು ರಾಕೇಶ್ (ಆರ್ಚರಿ)
ಬ್ರಾನ್ಜ್ – ನಿತ್ಯಾ ಶ್ರೀ ಸಿವನ್ (ಬ್ಯಾಡ್ಮಿಂಟನ್)
ಸದ್ಯ ಭಾರತ ಪದಕ ಪಟ್ಟಿಯಲ್ಲಿ 15ನೇ ಸ್ಥಾನದಲ್ಲಿದ್ದು, 3 ಚಿನ್ನ, 5 ಬೆಳ್ಳಿ ಮತ್ತು 7 ಕಂಚು ಗೆಲ್ಲುವುದರ ಮೂಲಕ ಒಟ್ಟು 15 ಪದಕಗಳನ್ನು ಗೆದ್ದಿದೆ.