ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಈಗ ಬಳ್ಳಾರಿ ಜೈಲಿನಲ್ಲಿದ್ದಾರೆ. ಈಗ ಅಲ್ಲಿನ ಕೈದಿಗಳನ್ನು ದರ್ಶನ್ ರನ್ನು ನೋಡುವ ಕನಸು ಕಾಣುತ್ತಿದ್ದಾರೆ. ಹೀಗಾಗಿ ದರ್ಶನ್ ರನ್ನು ತೋರಿಸುವಂತೆ ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.
ನಾವು ಅವರನ್ನು ಒಮ್ಮೆಯಾದರೂ ನೋಡಬೇಕು. ಒಂದೇ ಒಂದು ಸಲ ಭೇಟಿ ಮಾಡಿಸಿ ಸರ್ ಎಂದು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ದರ್ಶನ್ ಬಳ್ಳಾರಿ ಜೈಲು ಸೇರಿ ನಾಲ್ಕು ದಿನ ಕಳೆದಿದೆ. ಈ ಮಧ್ಯೆ ಅಲ್ಲಿರುವ ಕೈದಿಗಳಿಗೆ ನಟ ದರ್ಶನ್ ಅವರನ್ನು ನೋಡುವ ಕುತೂಹಲ ಹೆಚ್ಚಾಗಿದೆ. ಪ್ರತಿನಿತ್ಯ ಗಸ್ತು ತಿರುಗುತ್ತಾ ತಮ್ಮ ಸೆಲ್ ಬಳಿಗೆ ಬರುವ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಪೇದೆಗಳಿಗೆ, ದರ್ಶನ್ ಭೇಟಿ ಮಾಡಿಸುವಂತೆ ಪದೇ ಪದೇ ಮನವಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ನಟ ದರ್ಶನ್ ಅವರ ಸಿನಿಮಾಗಳನ್ನು ನಾವು ನೋಡಿದ್ದೇವೆ. ನಾವು ಅವರನ್ನು ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು ಎಂದು ಅಂದುಕೊಂಡಿದ್ದೆವು. ಆದರೆ, ಕೇಸ್ ಗಳ ಹಿನ್ನೆಲೆಯಲ್ಲಿ ನಾವು ಜೈಲಿಗೆ ಬರಬೇಕಾಯಿತು. ಆಗ ನಾನು ದರ್ಶನ್ ಅವರನ್ನು ನೋಡುವ ಬಯಕೆಯನ್ನು ಕೈಬಿಟ್ಟಿದ್ದೆವು ಎಂದು ಹಲವರು ಹೇಳಿದ್ದಾರೆ ಎನ್ನಲಾಗಿದೆ.
ಇದೊಂದು ಉಪಕಾರ ಮಾಡಿ ಸರ್. ದರ್ಶನ್ ರನ್ನು ಭೇಟಿ ಮಾಡಿಸಿ ಎಂದು ಹಲವರಂತೂ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಬೆನ್ನುನೋವು ಎಂದು ಹೇಳುತ್ತಿರುವ ದರ್ಶನ್ ಸೆ. 1ರಂದು ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯರಿಂದ ತಪಾಸಣೆಗೊಳಗಾಗಿದ್ದರು. ತಮಗೆ ಬೆನ್ನು ನೋವು ಜಾಸ್ತಿಯಾಗಿದ್ದು ಬಹಿರ್ದೆಸೆಗೆ ಹೋಗಲೂ ಕಷ್ಟವಾಗುತ್ತಿದೆ. ಹೀಗಾಗಿ ತಮಗೆ ಸರ್ಜಿಕಲ್ ಕುರ್ಚಿಯನ್ನು ಕೊಡುವಂತೆ ದರ್ಶನ್ ತಮ್ಮ ಜೈಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹಾಗಾಗಿ, ಅವರಿಗೆ ವೈದ್ಯರಿಂದ ತಪಾಸಣೆ ಮಾಡಿಸಲಾಗಿದ್ದು, ಜೈಲು ಅಧೀಕ್ಷಕರಿಗೆ ಈಗಾಗಲೇ ವೈದ್ಯರು ತಮ್ಮ ವರದಿಯನ್ನು ಕೊಟ್ಟಿದ್ದಾರೆ.
ಸೆ. 1ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಟ ದರ್ಶನ್ ಅವರನ್ನು ಭೇಟಿ ಮಾಡಿ ಮಾತನಾಡಿಸಿಕೊಂಡು ಹೋಗಿದ್ದರು. ಜೈಲಿನ ಸಂದರ್ಶನಕರ ಕೊಠಡಿಯಲ್ಲಿ ಸುಮಾರು ಅರ್ಧಗಂಟೆಗಳ ಕಾಲ ಮಾತುಕತೆ ನಡೆಸಿದ್ದರು. ದರ್ಶನ್ ಅವರಿಗೆ ತಾವು ತಂದಿದ್ದ ಚಾಮುಂಡೇಶ್ವರಿ ಪ್ರಸಾದವನ್ನು ಕೊಟ್ಟು ಹೋಗಿದ್ದರು.