ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿತ್ತು. ಈಗ ಮತ್ತೊಂದು ಸಂಕಷ್ಟ ಶುರುವಾಗಿದೆ.
ಅಪ್ರಾಪ್ತ ವಯಸ್ಸಿನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದ ಮಹಿಳೆಯ ಸಾವಿನ ಪ್ರಕರಣದ ಕುರಿತು ಪೊಲೀಸ್ ತನಿಖೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಒತ್ತಾಯಿಸಿದೆ. ಇದು ಕೂಡ ಯಡಿಯೂರಪ್ಪಗೆ ಸಂಕಷ್ಟ ತಂದೊಡ್ಡಿದೆ.
ದೂರು ನೀಡಿದ್ದ ಮಹಿಳೆ ಸಾವನ್ನಪ್ಪಿದ ನಂತರ ಶವ ಪರೀಕ್ಷೆ ನಡೆಸಿಲ್ಲ ಎಂಬ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಮಹಿಳೆಯ ಅನುಮಾನಾಸ್ಪದ ಸಾವು ಹಾಗೂ ಅಂತ್ಯಸಂಸ್ಕಾರದ ಕುರಿತು ವರದಿ ಸಲ್ಲಿಸುವಂತೆ ಬೆಂಗಳೂರು ಪೊಲೀಸರಿಗೆ ಆಯೋಗ ಸೂಚನೆ ನೀಡಿದೆ. ಫೆಬ್ರವರಿ ತಿಂಗಳಲ್ಲಿ ಯಡಿಯೂರಪ್ಪ ಅವರು ತಮ್ಮ ನಿವಾಸದಲ್ಲಿ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಮಹಿಳೆ ದೂರು ಸಲ್ಲಿಸಿದ್ದರು. ಆದರೆ, ಆನಂತರ ದೂರುದಾರೆ ಮೇ ತಿಂಗಳಲ್ಲಿ ಸಾವನ್ನಪ್ಪಿದ್ದರು. ಶ್ವಾಸಕೋಶ ಕ್ಯಾನ್ಸರ್ ನಿಂದ ಅವರು ಬಳಲುತ್ತಿದ್ದರು ಎಂದು ವೈದ್ಯರು ಹೇಳಿದ್ದರು.
ಈಗ ಮಹಿಳೆಯ ಸಾವಿನ ಸುತ್ತ ರಾಜ್ಯ ಮಹಿಳಾ ಆಯೋಗ ಅನುಮಾನ ವ್ಯಕ್ತಪಡಿಸಿದೆ. ಮಹಿಳೆಯ ಶವ ಪರೀಕ್ಷೆ ನಡೆಸದೆಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಕೂಡ ಆರೋಪ ಕೇಳಿ ಬಂದಿದೆ. ಈ ಕುರಿತು ಮಹಿಳೆಯ ಸಹೋದರ ಮತ್ತು ಕೆಲವು ಸಂಘಟನೆಗಳು ದೂರು ಸಲ್ಲಿಸಿವೆ.
ಯಡಿಯೂರಪ್ಪ ಅವರ ವಿರುದ್ಧ 2004ರ ಮಾರ್ಚ್ ತಿಂಗಳಲ್ಲಿ ಪೋಕ್ಸೋ ಕಾಯ್ದೆ ಅಡಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ದೂರು ನೀಡಿದ್ದ ಮಹಿಳೆ ಸಾವನ್ನಪ್ಪಿದ ನಂತರ ಮಹಿಳೆಯ ಸಹೋದರ, ಜೂನ್ ತಿಂಗಳಲ್ಲಿ ಕೋರ್ಟ್ ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಜುಲೈ 25ರಂದು ತನ್ನ ಆರೋಪಪಟ್ಟಿ ಸಲ್ಲಿಸಿತ್ತು.
ಲೈಂಗಿಕ ದೌರ್ಜನ್ಯದ ಹಳೆಯ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡುವಂತೆ ಬಿಎಸ್ ಯಡಿಯೂರಪ್ಪ ಅವರ ಮನೆಗೆ ಮಹಿಳೆ ಹಾಗೂ ಅವರ ಮಗಳು ತೆರಳಿದ್ದಾಗ ಬಾಲಕಿಯ ಬಲಗೈ ಹಿಡಿದ ಯಡಿಯೂರಪ್ಪ, ಆಕೆಯನ್ನು ಮೀಟಿಂಗ್ ರೂಮ್ ಗೆ ಕರೆದೊಯ್ದು, ಬಾಗಿಲು ಹಾಕಿಕೊಂಡಿದ್ದರು ಎಂದು ಆರೋಪಿಸಿರುವುದಾಗಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಿ ಅತ್ಯಾಚಾರ ಎಸಗಿದ ವ್ಯಕ್ತಿಯ ಮುಖವನ್ನು ನೆನಪಿಸಿಕೊಳ್ಳಲು ಸಾಧ್ಯವೇ ಎಂದು ಕೊಠಡಿಯ ಒಳಗೆ ಬಾಲಕಿಯನ್ನು ಯಡಿಯೂರಪ್ಪ ಪ್ರಶ್ನಿಸಿದ್ದರು ಎನ್ನಲಾಗಿದೆ.
ದೌರ್ಜನ್ಯ ನಡೆದ ಸಂದರ್ಭದಲ್ಲಿ ಆರೂವರೆ ವರ್ಷದವಳಾಗಿದ್ದ ಬಾಲಕಿ, ತನಗೆ ನೆನಪಿತ್ತು ಎಂದಾಗ, ಯಡಿಯೂರಪ್ಪ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ಸೂಚಿಸಲಾಗಿದೆ.
ಆದರೆ, ಈ ಆರೋಪವನ್ನು ಯಡಿಯೂರಪ್ಪ ತಳ್ಳಿ ಹಾಕಿದ್ದಾರೆ. ಈಗ ಮಹಿಳೆಯ ಸಾವಿನ ಅನುಮಾನ ಕೂಡ ಸಂಕಷ್ಟಕ್ಕೆ ದಾರಿ ಮಾಡಿಕೊಟ್ಟಿದೆ.