ಬೆಂಗಳೂರು: ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ನಾನು ಓದುವ ಪುಸ್ತಕ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಿಸುವ ನಿಟ್ಟಿನಲ್ಲಿ ಈ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಂದಿನಿಂದ ಈ ಅಭಿಯಾನ ಕಾರ್ಯಾರಂಭ ಮಾಡಲಿದೆ.
ಈ ಕಾರ್ಯಕ್ರಮದ ಮೂಲಕ ಶಾಲಾ ಮಕ್ಕಳನ್ನು ವಿಶೇಷವಾಗಿ ಗ್ರಾಮೀಣ ಮಕ್ಕಳನ್ನು ವ್ಯವಸ್ಥಿತವಾಗಿ ಕಲಿಕಾ ಕ್ಷೇತ್ರಕ್ಕೆ ಮರಳಿ ತರುವ ಹಾಗೂ ನಿರಂತರತೆಯನ್ನು ಕಾಪಾಡುವ ಗುರಿ ಹೊಂದಲಾಗಿದೆ. ಅರಿವು ಕೇಂದ್ರಗಳನ್ನು ಗ್ರಾಮೀಣ ಜ್ಞಾನ ಕೇಂದ್ರಗಳನ್ನಾಗಿಸಲು ಅರಿವು ಕೇಂದ್ರಗಳ ನವೀಕರಣ, ಡಿಜಿಟಲೀಕರಣ ಸೇರಿದಂತೆ ವಿವಿಧ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಈ ಕೇಂದ್ರಗಳಿಗೆ ಭೇಟಿ ನೀಡುವ ಮಕ್ಕಳಲ್ಲಿ ಪುಸ್ತಕ ಓದುವ ಹವ್ಯಾಸ ಉತ್ತೇಜಿಸುವ ಕಾರ್ಯ ಮಾಡಲಾಗುತ್ತದೆ. ಅಲ್ಲದೇ, ಸೆಪ್ಟೆಂಬರ್ ತಿಂಗಳಲ್ಲಿ ಬರುವು ಶಿಕ್ಷಕರ ದಿನ, ಸೆ. 8 ರಂದು ಅಂತಾರಾಷ್ಟ್ರೀಯ ಅಜ್ಜಿ-ತಾತಂದಿರ ದಿನ ಸೇರಿದಂತೆ ಇನ್ನುಳಿದ ದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಲು ಈ ಅಭಿಯಾನ ಆಯೋಜಿಸಲಾಗಿದೆ.