ಬೆಂಗಳೂರು: ರಾಜ್ಯದಲ್ಲಿ ಕಂದಾಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಶಾಕ್ ನೀಡಲು ಸರ್ಕಾರ ಮುಂದಾಗಿದೆ.
ರಾಜ್ಯಲ್ಲಿ ಇಲ್ಲಿಯವರೆಗೆ 13.17 ಲಕ್ಷ ಎಕರೆ ಕಂದಾಯ ಭೂಮಿ ಒತ್ತುವರಿಯಾಗಿದೆ ಎಂದು ಕಂದಾಯ ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಸೆ. 2ರಿಂದ ರಾಜ್ಯಾದ್ಯಂತ ಕಟ್ಟುನಿಟ್ಟಿನ ತೆರವು ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ.
ರಾಜ್ಯಾದ್ಯಂತ ಒಟ್ಟು 239 ತಹಸೀಲ್ದಾರ್ ಗಳಿದ್ದು, ತಮ್ಮ ವ್ಯಾಪ್ತಿಯಲ್ಲಿ ತಿಂಗಳಿಗೆ 10ರಿಂದ 20 ಒತ್ತುವರಿ ಪ್ರಕರಣಗಳಲ್ಲಿ ತೆರವು ಕಾರ್ಯ ಕೈಗೊಳ್ಳಬೇಕು. ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ವಾರಾಂತ್ಯದಲ್ಲಿ ಪ್ರಗತಿ ಪರಿಶೀಲಿಸಿ ವಿವರವನ್ನು ಕಂದಾಯ ಆಯುಕ್ತಾಲಯಕ್ಕೆ ಸಲ್ಲಿಸಬೇಕು ಎಂದದು ಸರ್ಕಾರ ಸೂಚಿಸಿದೆ.
ಕೆರೆ, ಸ್ಮಶಾನ ಭೂಮಿ ಒತ್ತುವರಿಯನ್ನು ಆದ್ಯತೆ ಮೇರೆಗೆ ತೆರವುಗೊಳಿಸಬೇಕು. ಕಂದಾಯ ಜಮೀನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ವಾಣಿಜ್ಯ ಕಟ್ಟಡ ಸೇರಿದಂತೆ ಲಾಭದಾಯಕ ಉದ್ದೇಶಕ್ಕೆ ಅಭಿವೃದ್ಧಿಪಡಿಸಿದ್ದರೆ ಮುಲಾಜಿಲ್ಲದೆ ತೆರವುಗೊಳಿಸಬೇಕು ಎಂದು ಸೂಚಿಸಲಾಗಿದೆ.
ಕೃಷಿ ಭೂಮಿಯಾಗಿದ್ದರೆ, ಬೆಳೆ ಬೆಳೆದಿದ್ದರೆ, ಕೃಷಿ ಚಟುವಟಿಕೆ ನಡೆದಿರುವ ಭೂಮಿಯ ಒತ್ತುವರಿ ಕೊನೆಯ ಹಂತದಲ್ಲಿ ಪರಿಶೀಲಿಸಿ ನಿಯಮಾನುಸಾರ ತೆರವುಗೊಳಿಸಲು ಸೂಚಿಸಲಾಗಿದೆ. ಕಂದಾಯ ಇಲಾಖೆ, ಶಿಕ್ಷಣ, ಅರಣ್ಯ, ಆರೋಗ್ಯ, ಲೋಕೋಪಯೋಗಿ ಸೇರಿದಂತೆ ನಾನಾ ಇಲಾಖೆಗಳಿಗೆ ಸೇರಿದ 14.1 ಲಕ್ಷ ಸರಕಾರಿ ಆಸ್ತಿಗಳಿವೆ ಎಂದು ಲೆಕ್ಕ ಹಾಕಲಾಗಿದೆ.
ಈ ಮೂಲಕ ರಾಜ್ಯದಲ್ಲಿ 1.1 ಕೋಟಿ ಎಕರೆ ಸರಕಾರಿ ಭೂಮಿಯಿರುವುದು ಗೊತ್ತಾಗಿದೆ. ಗ್ರಾಮ ಆಡಳಿತ ಅಧಿಕಾರಿಗಳು ಇಲ್ಲಿಯವರೆಗೆ 13.3 ಲಕ್ಷ ಆಸ್ತಿಗಳಿಗೆ ಭೇಟಿ ನೀಡಿ ಪರಿಶೀಲಿಸಿ ಖಾತರಿಪಡಿಸಿಕೊಂಡು ಆ್ಯಪ್ ನಲ್ಲಿ ದಾಖಲಿಸಲು ಯಶಸ್ವಿಯಾಗಿದ್ದಾರೆ. 2.7 ಲಕ್ಷ ಆಸ್ತಿಗಳನ್ನು ಕಂದಾಯ ಭೂಮಿ ಎಂದೂ ಗುರುತಿಸಲಾಗಿದೆ. 26 ಲಕ್ಷ ಎಕರೆ ಕಂದಾಯ ಭೂಮಿ ಇರುವುದು ಕಂಡುಬಂದಿದೆ. ಈ ಪೈಕಿ 13.17 ಲಕ್ಷ ಎಕರೆ ಭೂಮಿ ಒತ್ತುವರಿಯಾಗಿರುವುದನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ಯಶಸ್ವಿಯಾಗಿದೆ. ತಹಸೀಲ್ದಾರ್‌ಗಳು ಒತ್ತುವರಿ ತೆರವು ಕಾರ್ಯವನ್ನು ಆದ್ಯತೆ ಮೇರೆಗೆ ಕೈಗೊಳ್ಳಬೇಕು ಎಂದು ಕಂದಾಯ ಸಚಿವರು ಖಡಕ್ ಸೂಚನೆ ನೀಡಿದ್ದಾರೆ.