ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ದಿನದಿಂದ ದಿನಕ್ಕೆ ತೂಕ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ 2 ತಿಂಗಳು 6 ದಿನಗಳಲ್ಲಿ ಒಟ್ಟು 15 ಕೆಜಿ ತೂಕ ಇಳಿದಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆ ಜೈಲಿನಲ್ಲಿ ರಾಜಾತಿಥ್ಯ ಪಡೆಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.
ಬಳ್ಳಾರಿಗೆ ಶಿಫ್ಟ್ ಮಾಡುವುದಕ್ಕೂ ಮುನ್ನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರ ದೇಹಸ್ಥಿತಿ ಹಾಗೂ ಆರೋಗ್ಯದ ಕುರಿತು ವೈದ್ಯರು ಪರಿಶೀಲನೆ ನಡೆಸಿದ್ದರು. ಜೈಲಿಗೆ ಬಂದಿದ್ದ ಸಂದರ್ಭದಲ್ಲಿ 107 ಕೆ.ಜಿ ಇದ್ದ ದರ್ಶನ್ 15 ಕೆ.ಜಿ ತೂಕ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಅವರ ರಕ್ತದೊತ್ತಡ ಸಾಮಾನ್ಯವಾಗಿದೆ. ಬೆನ್ನುಹುರಿ ಸೇರಿದಂತೆ ಸಣ್ಣಪುಟ್ಟ ಸಮಸ್ಯೆ ಹೊರತುಪಡಿಸಿ ದೈಹಿಕವಾಗಿ ಸಧೃಡವಾಗಿರುವುದು ವೈದ್ಯಕೀಯ ತಪಾಸಣೆಯಲ್ಲಿ ಕಂಡು ಬಂದಿದೆ. ಈ ವೈದ್ಯಕೀಯ ವರದಿಯನ್ನು ಬಳ್ಳಾರಿ ಜೈಲಿನ ಮುಖ್ಯ ಅಧೀಕ್ಷಕರಿಗೂ ಸಲ್ಲಿಸಲಾಗಿದೆ ಎಂದು ತಿಳಿದು ಬಂದಿದೆ.
ಸಿಗರೇಟ್ ಹಾಗೂ ಟೀ ಮಗ್, ಪ್ರತ್ಯೇಕ ಮಂಚ ಪಡೆದಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರ ಎದುರು ದರ್ಶನ್ ತೂಕ ಕಳೆದುಕೊಂಡಿರುವ ವಿಷಯವನ್ನೂ ಹೇಳಿದ್ದಾರೆ ಎನ್ನಲಾಗಿದೆ. ನಾನು ಯಾವುದೇ ವಿಶೇಷ ಸವಲತ್ತು ಪಡೆದಿಲ್ಲ. ಹೊರಗಡೆಯಿಂದ ಬಿರಿಯಾನಿ ತರಿಸಿಕೊಂಡೂ ತಿಂದಿಲ್ಲ. ಜೈಲು ಊಟವನ್ನೇ ಸೇವಿಸುತ್ತಿದ್ದು, ಜೀರ್ಣವಾಗದ ಕಾರಣ ಸೊರಗಿದ್ದೇನೆ. ದೇಹದ ತೂಕವು 15 ಕೆ.ಜಿ ಕಡಿಮೆಯಾಗಿದೆ ಎಂದು ದರ್ಶನ್ ವಿಚಾರಣಾ ಅಧಿಕಾರಿಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ ಎನ್ನಲಾಗಿದೆ.
ವಾಯುವಿಹಾರ ಮಾಡುತ್ತಿದ್ದಾಗ ನಾಗ ಕರೆದರು. ಹೀಗಾಗಿ ಹೋಗಿ ಕುಳಿತುಕೊಂಡೆ. ಸಿಗರೇಟು ನೀಡಿದರು. ಕುಡಿಯಲು ಬಿಸಿ ನೀರು ಬೇಕು ಅಂದಿದ್ದಕ್ಕೆ ತಂದು ಕೊಟ್ಟರು. ಅದನ್ನು ಹೊರತುಪಡಿಸಿ ಆತನೊಂದಿಗೆ ಬೇರಾರಯವ ನಂಟೂ ಇಲ್ಲ. ಸಿಗರೇಟ್ ಎಲ್ಲಿಂದ ಬಂತು ಎಂಬುವುದೂ ಗೊತ್ತಿಲ್ಲ ಎಂದು ಹೇಳಿದ್ದಾರ ಎನ್ನಲಾಗಿದೆ.
ಕೈದಿಯೊಬ್ಬಾತ ಬಂದು ವಿಡಿಯೊ ಕಾಲ್ ಮಾಡಿ ನಮ್ಮ ಹುಡುಗನಿಗೆ ಹಾಯ್ ಮಾಡಿ ಎಂದ. ನಾನು ಹಾಯ್ ಮಾಡಿ ಊಟ ಆಯ್ತಾ ಅಂದೆ ಅಷ್ಟೇ. ನಾನು ಮೊಬೈಲ್ ಬಳಸಿಲ್ಲ ಎಂದು ಕೂಡ ದರ್ಶನ್ ಹೇಳಿದ್ದಾರೆ.