ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದೆ. ಮೂರನೇ ದಿನ ಭಾರತಕ್ಕೆ ಐದನೇ ಪದಕ ಧಕ್ಕಿದೆ. ಎರಡನೇ ದಿನ 1 ಚಿನ್ನ ಸೇರಿದಂತೆ 4 ಪದಕ ಗೆದ್ದಿದ್ದ ಭಾರತಕ್ಕೆ ಮೂರನೇ ದಿನ ಒಂದು ಕಂಚಿನ ಪದಕ ಸಿಕ್ಕಿದೆ. ಈ ಮೂಲಕ ಪದಕಗಳ ಸಂಖ್ಯೆ 5ಕ್ಕೆ ಏರಿಕೆ ಕಂಡಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ ಎಸ್ ಹೆಚ್ 1 ಫೈನಲ್ ನಲ್ಲಿ ಭಾರತದ ರುಬಿನಾ ಫ್ರಾನ್ಸಿಸ್ 211.1 ಅಂಕ ಸಂಪಾದಿಸುವುದರ ಮೂಲಕ ಮೂರನೇ ಸ್ಥಾನ ಗಳಿಸಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಫೈನಲ್ ಸುತ್ತಿನಲ್ಲಿ ರುಬಿನಾ ಬೆಳ್ಳಿ ಪದಕದ ರೇಸ್ ನಲ್ಲಿದ್ದರು. ಆದರೆ ಕೊನೆಯ ಎರಡು ಶಾಟ್ ಗಳಲ್ಲಿ ಲಯ ಕಳೆದುಕೊಂಡು 211.1 ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ 6ನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದರು.
ರುಬಿನಾ ಫ್ರಾನ್ಸಿಸ್ ಗೆದ್ದಿರುವ ಕಂಚಿನ ಪದಕದ ಮೂಲಕ ಶೂಟಿಂಟ್ ನಲ್ಲಿ ಭಾರತ ಒಟ್ಟು ಇಲ್ಲಿಯವರೆಗೆ ನಾಲ್ಕು ಪದಕ ಗೆದ್ದಂತಾಗಿದೆ. ಒಟ್ಟಾರೆ 5ನೇ ಪದಕವಾಗಿದೆ. ಪ್ಯಾರಾಲಿಂಪಿಕ್ಸ್ ನ ಎರಡನೇ ದಿನ, ಅವನಿ ಲೆಖರಾ ಮಹಿಳೆಯರ 10 ಮೀಟರ್ ಏರ್ ರೈಫಲ್ (SH1) ಈವೆಂಟ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದೇ ಈವೆಂಟ್ ನಲ್ಲಿ ಮತ್ತೊರ್ವ ಭಾರತೀಯ ಸ್ಪರ್ಧಿ ಮೋನಾ ಅಗರ್ವಾಲ್ ಕಂಚಿನ ಪದಕ ಗೆದ್ದಿದ್ದರು. ಆ ನಂತರ, ಪುರುಷರ 10 ಮೀಟರ್ ಏರ್ ಪಿಸ್ತೂಲ್ (SH1) ನಲ್ಲಿ ಮನೀಶ್ ನರ್ವಾಲ್ ಬೆಳ್ಳಿ ಪದಕ ಗೆದ್ದಿದ್ದರು. ಉಳಿದಂತೆ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಭಾರತದ ಪ್ರೀತಿ ಪಾಲ್ ಕಂಚಿನ ಪದಕ ಗೆದ್ದಿದ್ದರು.
ರುಬಿನಾ, ಪಿಸ್ತೂಲ್ ಶೂಟಿಂಗ್ ನಲ್ಲಿ ಪ್ಯಾರಾಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆ ಬರೆದಿದ್ದಾರೆ.