ನವದೆಹಲಿ: ಪತಂಜಲಿ ಸಂಸ್ಥೆಯನ್ನು ಇತ್ತೀಚೆಗಷ್ಟೇ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲಿಯೇ ಯೋಗ ಗುರು ಬಾಬಾ ರಾಮ್ ದೇವ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ.
ಪತಂಜಲಿ ಬ್ರ್ಯಾಂಡ್ ನ ಹರ್ಬಲ್ ಹಲ್ಲಿನ ಪುಡಿ ‘ದಿವ್ಯ ಮಂಜನ್’ ನ್ನು ‘ಸಸ್ಯಾಹಾರ’ ಎಂದು ನಮೂದಿಸಲಾಗಿದೆ. ಆದರೆ ಅದರಲ್ಲಿ ‘ಮಾಂಸಾಹಾರ’ ಉತ್ಪನ್ನ ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ವ್ಯಕ್ತಿಯೊಬ್ಬರು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಮಾಂಸಾಹಾರಿ ಉತ್ಪನ್ನಗಳನ್ನು ಸೇವಿಸುವುದನ್ನು ತಮ್ಮ ಧಾರ್ಮಿಕ ನಂಬಿಕೆಯು ನಿರ್ಬಂಧಿಸುವುದರಿಂದ, ಈ ಆವಿಷ್ಕಾರವು ಮುಖ್ಯವಾಗಿ ತಮಗೆ ಹಾಗೂ ತಮ್ಮ ಕುಟುಂಬಕ್ಕೆ ಆಘಾತ ಉಂಟುಮಾಡಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ದಿವ್ಯ ಮಂಜನ್’ ಹಲ್ಲಿನ ಪುಡಿಯನ್ನು ಸಸ್ಯಾಹಾರಿ ಎಂದು ಮತ್ತು ಸಸ್ಯ ಆಧಾರಿತ ಆಯುರ್ವೇದ ಉತ್ಪನ್ನ ಎಂದು ಪ್ರಚಾರ ಮಾಡಿದ್ದರಿಂದ ಸುದೀರ್ಘ ಕಾಲದಿಂದ ಅದನ್ನು ಬಳಸುತ್ತಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. ಆದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ‘ದಿವ್ಯ ಮಂಜನ್’ ಉತ್ಪನ್ನವು ಸೆಪಿಯಾ ಆಫಿಸಿನಲಿಸ್ (ಸಮುದ್ರಫೆನ್) ಅಥವಾ ಕಟಲ್‌ಫಿಶ್ ಎಂಬ ಮೀನಿನ ಮೂಳೆಗಳಿಂದ ಹೊರ ತೆಗೆಯಲಾದ ಅಂಶ ಒಳಗೊಂಡಿದೆ ಎನ್ನುವುದು ಬೆಳಕಿಗೆ ಬಂದಿದೆ.
ದಿವ್ಯ ಮಂಜನ ಉತ್ಪನ್ನದಲ್ಲಿ ಪ್ರಾಣಿ ಆಧಾರಿತ ಸಮುದ್ರಫೆನ್ ಉತ್ಪನ್ನಗಳನ್ನು ಬಳಸುತ್ತಿರುವುದನ್ನು ಬಾಬಾ ರಾಮ್ ದೇವ್ ಯೂಟ್ಯೂಬ್ ವಿಡಿಯೋವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಆದರೆ, ಉತ್ಪನ್ನದಲ್ಲಿ, ಸಸ್ಯಾಹಾರಿ ಉತ್ಪನ್ನ ಎಂಬ ಸಂಕೇತ ನೀಡುವ ಹಸಿರು ಚುಕ್ಕೆ ಇದೆ. ಆದರೆ ಅದರಲ್ಲಿ ಬಳಸಿರುವ ಸಾಮಗ್ರಿಗಳ ಪಟ್ಟಿಯು, ಹಲ್ಲಿನ ಪುಡಿಯಲ್ಲಿ ಸೇಪಿಯಾ ಆಫಿಸಿನಲಿಸ್ ಇರುವುದನ್ನು ಸ್ಪಷ್ಟವಾಗಿ ಹೇಳುತ್ತದೆ ಎಂದು ನ್ಯಾಯವಾದಿ ಅರ್ಜಿಯಲ್ಲಿ ಆರೋಪಿಸಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ), ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ ಮತ್ತು ಆಯುಷ್ ಸಚಿವಾಲಯ ಸೇರಿದಂತೆ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಮಾಂಸಾಹಾರಿ ಉತ್ಪನ್ನವನ್ನು ಬಳಸಿರುವುದರಿಂದ ಉಂಟಾಗಿರುವ ಆಘಾತಕ್ಕೆ ಪರಿಹಾರ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಅರ್ಜಿ ಪರಿಗಣಿಸಿರುವ ದೆಹಲಿ ಹೈಕೋರ್ಟ್, ಪತಂಜಲಿ ಆಯುರ್ವೇದ, ಬಾಬಾ ರಾಮ್‌ದೇವ್, ಕೇಂದ್ರ ಸರ್ಕಾರ ಮತ್ತು ಉತ್ಪನ್ನ ತಯಾರಿಸುವ ಪತಂಜಲಿಯ ದಿವ್ಯ ಫಾರ್ಮಸಿಗೆ ನೋಟಿಸ್ ನೀಡಿದೆ. ಅಲ್ಲದೇ, ನ. 28ಕ್ಕೆ ವಿಚಾರಣೆ ನಿಗದಿ ಪಡಿಸಿದೆ.