ದಾವಣಗೆರೆ: ಕಲುಷಿತ ನೀರು ಸೇವಿಸಿ ಆಸ್ಪತ್ರೆಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚಳವಾಗಿದ್ದು, ಆತಂಕಕ್ಕೆ ಕಾರಣವಾಗುತ್ತಿದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗ ವಾಂತಿ ಭೇದಿಯಿಂದ ವಿವಿಧ ಆಸ್ಪತ್ರೆಗಳಿಗೆ ಜನ ದಾಖಲಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ.
ಗ್ರಾಮದ ಸುಮಾರು 52 ಜನ ಚನ್ನಗಿರಿ ಆಸ್ಪತ್ರೆ, ಭದ್ರಾವತಿ, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಜೋಳದಾಳ್ ಗ್ರಾಮದಲ್ಲೇ ಬೀಡು ಬಿಟ್ಟಿದ್ದಾರೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈಗಾಗಲೇ 15 ಜನ ಗುಣಮುಖರಾಗಿದ್ದಾರೆ ಎಂದು ದಾವಣಗೆರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ ಮಾಹಿತಿ ನೀಡಿದ್ದಾರೆ.
ಜನರು ತೀವ್ರವಾಗಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಆಂಬ್ಯುಲೆನ್ಸ್ ನಿಯೋಜಿಸಲಾಗಿದೆ. ಸಿಬ್ಬಂದಿ ನೇಮಕ ಮಾಡಿ ಮುಂಜಾಗ್ರತ ಕ್ರಮವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದ ಪ್ರತಿಯೊಬ್ಬರಿಗೂ ತಪಾಸಣೆ ಮಾಡಲಾಗುತ್ತಿದೆ. ಅಲ್ಲದೇ, ಕಾಯಿಸಿ ಆರಿಸಿರುವ ನೀರು ಕುಡಿಯುವಂತೆ ಸೂಚಿಸಲಾಗಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಜೋಳದಾಳ ಗ್ರಾಮಕ್ಕೆ ಚನ್ನಗಿರಿ ಇಓ ಬಿ.ಕೆ.ಉತ್ತಮ್, ಕುಡಿಯುವ ನೀರು ವಿಭಾಗದ ಎಇಇ ಲೋಹಿತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರಂಭದಲ್ಲಿ ನಾಲ್ಕು ಜನರರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿತ್ತು. ಆನಂತರ 25 ಜನರಲ್ಲಿ ಕಾಣಿಸಿಕೊಂಡಿತ್ತು. ಸದ್ಯ ಈ ಸಂಖ್ಯೆ 52ಕ್ಕೆ ಏರಿಕೆ ಕಂಡಿದೆ.