ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದ ಆಟಗಾರ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ 427 ರನ್ ಗಳಿಗೆ ಮೊದಲ ಇನ್ನಿಂಗ್ಸ್ ನ್ನು ಅಂತ್ಯಗೊಳಿಸಿದೆ. ತಂಡದ ಪರ ಜೋ ರೂಟ್ ಹಾಗೂ ವೇಗದ ಬೌಲರ್ ಗಸ್ ಅಟ್ಕಿನ್ಸನ್ ಶತಕದ ಇನ್ನಿಂಗ್ಸ್ ಕಟ್ಟಿದ್ದಾರೆ. ಹೀಗಾಗಿ ಇಂಗ್ಲೆಂಡ್ ತಂಡ ಉತ್ತಮ ರನ್ ಗಳಿಸುವಂತಾಯಿತು. 8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದ ಗಸ್ ಅಟ್ಕಿನ್ಸನ್ ಕೇವಲ 103 ಎಸೆತಗಳಲ್ಲಿ ಶತಕ ಪೂರೈಸಿದರು. ಗಸ್ ಅಟ್ಕಿನ್ಸನ್ ಅವರ ಈ ಶತಕದ ಇನ್ನಿಂಗ್ಸ್ ನಲ್ಲಿ 4 ಬೌಂಡರಿ ಮತ್ತು 12 ಸಿಕ್ಸರ್ ಇದ್ದರು. ಅಟ್ಕಿನ್ಸನ್ 118 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಈ ಶತಕದ ಮೂಲಕ ಗಸ್ ಅಟ್ಕಿನ್ಸನ್ ಅವರು ಲಾರ್ಡ್ಸ್ ಮೈದಾನದಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಜೋ ರೂಟ್ ಅವರೊಂದಿಗೆ 7ನೇ ವಿಕೆಟ್‌ಗೆ 111 ಎಸೆತಗಳಲ್ಲಿ 92 ರನ್ ಸೇರಿಸಿದರೆ, ಇದಾದ ಬಳಿಕ ಅಟ್ಕಿನ್ಸನ್ ಮ್ಯಾಥ್ಯೂ ಪಾಟ್ಸ್ ಜೊತೆಗೂಡಿ 97 ಎಸೆತಗಳಲ್ಲಿ 85 ರನ್ ಗಳಿಸಿದರು. ಅಟ್ಕಿನ್ಸನ್ ಜುಲೈ 10 ರಂದು ಇದೇ ಲಾರ್ಡ್ಸ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ವೆಸ್ಟ್ ಇಂಡೀಸ್ ವಿರುದ್ಧದ ಆ ಪಂದ್ಯದಲ್ಲಿ ಅಟ್ಕಿನ್ಸನ್ ಮೊದಲ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲೂ 5 ವಿಕೆಟ್ ಕಬಳಿಸಿದ್ದರು. ಈ ಮೂಲಕ ಲಾರ್ಡ್ಸ್ ಮೈದಾನದಲ್ಲಿ 10 ವಿಕೆಟ್ ಪಡೆದವರ ಪಟ್ಟಿಯಲ್ಲಿಯೂ ಗಸ್ ಅಟ್ಕಿನ್ಸನ್ ಸ್ಥಾನ ಪಡೆದಿದ್ದರು.
ಈ ಪಂದ್ಯದಲ್ಲಿ ರೂಟ್ 206 ಎಸೆತಗಳಲ್ಲಿ 18 ಬೌಂಡರಿಗಳ ಸಹಿತ 143 ರನ್ ಗಳಿಸಿದ್ದಾರೆ. ಅಲ್ಲದೇ, ಬೆನ್ ಡಕೆಟ್ 40 ರನ್ ಹಾಗೂ ಹ್ಯಾರಿ ಬ್ರೂಕ್ 33 ರನ್ ಗಳಿಸಿದ್ದಾರೆ. ಈಗಾಗಲೇ ಮೊದಲ ಪಂದ್ಯವನ್ನು ಇಂಗ್ಲೆಂಡ್ ಗೆದ್ದಿದ್ದು, ಎರಡನೇ ಪಂದ್ಯದಲ್ಲಿ ಶ್ರೀಲಂಕಾ ಗೆಲ್ಲುವ ಒತ್ತಡದಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಪಾಯಿಂಟ್ಸ್ ಪಟ್ಟಿಯಲ್ಲಿ ಇಂಗ್ಲೆಂಡ್ ನಾಲ್ಕನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ 5ನೇ ಸ್ಥಾನದಲ್ಲಿದೆ.