ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದರ್ಶನ್, ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬರುತ್ತಿದ್ದಂತೆ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ಶಿಫ್ಟ್ ಮಾಡಲಾಗಿದೆ.
ಜೈಲಿನಲ್ಲಿ ರಾತ್ರಿ ವೇಳೆ ದೇವರ ಸ್ತ್ರೋತ್ರಗಳಿದ್ದ ಪುಸ್ತಕದ ಮೊರೆ ಹೋಗಿರುವುದಾಗಿ ತಿಳಿದು ಬಂದಿದೆ.
ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾಗಿರುವ ದರ್ಶನ್ ಪುಸ್ತಕದ ಮೊರೆ ಹೋಗಿದ್ದಾರೆ. ಮಧ್ಯಾಹ್ನದ ಊಟ ಮಾಡಲು ನಿರಾಕರಿಸಿದ್ದ ದರ್ಶನ್ ರಾತ್ರಿ ವೇಳೆ ಅನ್ನ, ಕಾಳು ಸಾರು, ಚಪಾತಿ, ಮಜ್ಜಿಗೆ ಸೇವಿಸಿದ್ದಾರೆ ಎನ್ನಲಾಗಿದೆ.
ಕಾರಾಗೃಹದ ಕೈದಿಗಳು ಹಾಗೂ ವಿಚಾರಣಾಧೀನ ಆರೋಪಿಗಳಿಗೆ ಬೆಳಗ್ಗೆ ಉಪಾಹಾರದ ರೂಪದಲ್ಲಿ ಉಪ್ಪಿಟ್ಟು, ಚಿತ್ರಾನ್ನ, ಅವಲಕ್ಕಿ, ಟೊಮೆಟೋ ಬಾತ್ ಸೇರಿದಂತೆ ಯಾವುದಾದರು ಒಂದನ್ನು ನೀಡುತ್ತಾರೆ. ಚಹಾ ಕೊಡಲಾಗುತ್ತದೆ. ಮಧ್ಯಾಹ್ನದ ಊಟಕ್ಕೆ ಅನ್ನ, ಸಾಂಬಾರ್, ಚಪಾತಿ, ಮುದ್ದೆ, ಮಜ್ಜಿಗೆ ನೀಡಲಾಗುತ್ತದೆ. ಪ್ರತಿ ಶುಕ್ರವಾರ ಚಿಕನ್ ಅಥವಾ ಮಟನ್ ಹಾಗೂ ಪ್ರತಿ ಮಂಗಳವಾರ ಮೊಟ್ಟೆ ನೀಡಲಾಗುತ್ತದೆ. ಹೀಗಾಗಿ ದರ್ಶನ್ ಇನ್ನೂ ಮುಂದೆ ಇದೇ ಊಟಕ್ಕೆ ಒಗ್ಗಿಕೊಳ್ಳಬೇಕಾಗುತ್ತದೆ.
ಕಾರಾಗೃಹದಲ್ಲಿ ನೋಂದಣಿ ಸಂದರ್ಭದಲ್ಲಿ ದರ್ಶನ್ ಅವರ ಕೈಯಲ್ಲಿದ್ದ ಕಡಗ, ಕೊರಳಿನಲ್ಲಿದ್ದ ಸರವನ್ನು ನಿಯಮದ ಪ್ರಕಾರ ತೆಗೆದಿರಿಸಲಾಗಿದೆ. ಆರಂಭದ 7 ದಿನ ಮಾತ್ರ ಅವರ ಪತ್ನಿ, ರಕ್ತ ಸಂಬಂಧಿಗಳು, ವಕೀಲರು, ಆರೋಪಿ ಬಯಸಿದರೆ ನಿರಂತರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಆನಂತರ ವಾರದಲ್ಲಿ ಒಂದು ದಿನ ಮಾತ್ರ ಆರೋಪಿಯ ಭೇಟಿಗೆ ಅವಕಾಶ ಇರುತ್ತದೆ ಎನ್ನಲಾಗಿದೆ.
ರಿಜಿಸ್ಟರ್ ಪುಸ್ತಕದಲ್ಲಿ ವಿಚಾರಣಾಧೀನ ಕೈದಿಯ ಹೆಸರು, ಸ್ವಂತ ಊರು, ಯಾವ ಪ್ರಕರಣದಲ್ಲಿ ಜೈಲಿಗೆ ಬಂದಿದ್ದಾರೆ? ಬಳ್ಳಾರಿ ಜೈಲಿಗೆ ಕರೆತರಲು ಏನು ಕಾರಣ? ಸೇರಿದಂತೆ ಎಲ್ಲ ರೀತಿಯ ವಿವರ ನಮೂದಿಸಲಾಗಿದೆ. ನಂತರ ವಿಚಾರಣಾಧೀನ ಕೈದಿ ನಂ.511 ನೀಡಿ ಹೈ ಸೆಕ್ಯೂರಿಟಿ ಜೈಲಿಗೆ ಕಳುಹಿಸಲಾಯಿತು.
ದರ್ಶನ್ ಸೆಲ್ ಗೆ ಹೋಗಲು ಮೂರು ಗೇಟ್ ದಾಟಬೇಕಿದೆ. ಎರಡು ಬದಿ ಸೇರಿ ಒಟ್ಟು 30 ಸೆಲ್ ಗಳಿವೆ. 15 ಸೆಲ್ ಗಳಿರುವ ಬ್ಯಾರಕ್ ನಲ್ಲಿ ದರ್ಶನ್ ರನ್ನು ಬಂಧಿಸಡಲಾಗಿದೆ. ಟಿವಿ ಸೇರಿದಂತೆ ಯಾವುದೇ ಸೌಲಭ್ಯವಿಲ್ಲ. ಇಲ್ಲಿ 40*60 ಅಳತೆಯ ಪ್ರಾಂಗಣ ಬಿಟ್ಟರೆ, ಜಿಮ್, ಯೋಗ ಸೇರಿ ಯಾವುದೇ ವ್ಯವಸ್ಥೆಯಿಲ್ಲ ಎಂದು ತಿಳಿದು ಬಂದಿದೆ. ಇಲ್ಲಿನ ಕೈದಿಗಳಿಗೆ ಆರೋಪಿ ದರ್ಶನ್ ಅವರ ಸಂಪರ್ಕ ಸಿಗುವುದಿಲ್ಲ.
ಸದ್ಯ ಈ ಬ್ಯಾರಕ್‌ನಲ್ಲಿ ಮಂಗಳೂರು, ಹಾಸನ, ಶಿವಮೊಗ್ಗ, ಬೆಂಗಳೂರಿನಲ್ಲಿ ವಿವಿಧ ಆರೋಪ ಮತ್ತು ಅಪರಾಧಗಳಡಿ ಬಂಧಿಯಾದ 11 ಜನ ಆರೋಪಿಗಳಿದ್ದಾರೆ. ಆದರೆ, ದರ್ಶನ್ ಸೆಲ್ ಸುತ್ತಮುತ್ತ ಭಾರೀ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.