ತುಮಕೂರು: ಯುವಕನೊಬ್ಬ ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮಂಗಳಮುಖಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಈ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ಪಟ್ಟಣದ ಕೋಟೆ ಪ್ರದೇಶದಲ್ಲಿ ನಡೆದಿದೆ. ಪ್ರೀತಿ ನಿರಾಕರಿಸಿದ ಮಂಗಳಮುಖಿಗೆ ಯುವಕನೊರ್ವ ಚಾಕುವಿನಿಂದ ಇರಿದು ಯುವಕ ಪರಾರಿಯಾಗಲು ಯತ್ನಿಸಿದಾಗ ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಹನೀಷಾ (21) ಚಾಕುವಿನಿಂದ ಇರಿತಕ್ಕೊಳಗಾದ ಮಂಗಳಮುಖಿ. ಮಂಡ್ಯದ ಆದಿಲ್ (23) ಚಾಕುವಿನಿಂದ ಇರಿದು ಪರಾರಿಯಾಗಿರುವ ಆರೋಪಿ. ಮಂಗಳಮುಖಿ ಹಾಗೂ ಆದಿಲ್ ಕಳೆದ ಆರೇಳು ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಹನೀಷಾ ಲಿಂಗತ್ವ ಅಲ್ಪಸಂಖ್ಯಾತರ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಬೇರೆ ಬೇರೆ ಊರುಗಳಿಗೆ ತೆರಳುತ್ತಿದ್ದರು. ಇದಕ್ಕೆ ಆರೋಪಿ ಆದಿಲ್ ಆಕ್ಷೇಪ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.
ಹೀಗಾಗಿ ಆತನ ವರ್ತನೆಗೆ ಬೇಸತ್ತ ಹನೀಷಾ ಪ್ರೀತಿ ನಿರಾಕರಿಸಿದ್ದಳು. ಹೀಗಾಗಿ ಬುಧವಾರ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ಕೋಪದಲ್ಲಿದ್ದ ಆದಿಲ್ ಚಾಕುವಿನಿಂದ ಇರಿದಿದ್ದಾನೆ. ಗಾಯಾಳು ಹನೀಷಾರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.