ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್, ಪರಪ್ಪನ ಅಗ್ರಹಾರದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಫೋಟೋ ಹಾಗೂ ವೈರಲ್ ಆಗಿದ್ದವು. ಹೀಗಾಗಿ ಈ ಕುರಿತು ತನಿಖೆ ನಡೆಯುತ್ತಿದ್ದು, ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಸೂಚಿಸಿದೆ.
ಹೀಗಾಗಿ ನಟ ದರ್ಶನ್ ಇಂದು ಮಧ್ಯಾಹ್ನ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಲಿದ್ದಾರೆ. ಆದರೆ, ಬಳ್ಳಾರಿ ಜೈಲಿಗೂ ಹಾಗೂ ಬೆಂಗಳೂರು ಜೈಲಿಗೂ ವ್ಯತ್ಯಾಸವಿದೆ. ಪರಿಸರ, ವಾತಾವರಣ ಸೇರಿದಂತೆ ಊಟದ ಮೆನು ಕೂಡ ಬದಲಾಗಿರುತ್ತದೆ. ಪರಪ್ಪನ ಅಗ್ರಹಾರದಲ್ಲಿಯೇ ದರ್ಶನ್ ಊಟ ಸರಿ ಹೊಂದುತ್ತಿಲ್ಲ. ಮನೆಯೂಟ ಬೇಕು ಎಂದು ಮನವಿ ಮಾಡಿದ್ದರು. ಆದರೆ, ಈಗ ಬಳ್ಳಾರಿಯ ಊಟಕ್ಕೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬುವುದನ್ನು ನೋಡಬೇಕಿದೆ.
ಪರಪ್ಪನ ಅಗ್ರಹಾರ ಜೈಲಿಗೆ ಹೋಲಿಸಿದರೆ ಬಳ್ಳಾರಿ ಜೈಲಿನ ವಿಸ್ತೀರ್ಣ ಕಡಿಮೆ. ಹೀಗಾಗಿ ಬ್ಯಾರಕ್ ಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ವ್ಯವಸ್ಥಿತವಾಗಿಲ್ಲ ಎಂಬ ಮಾತುಗಳಿವೆ. ಊಟದ ವಿಷಯಕ್ಕೆ ಬರುವುದಾದರೆ, ಸರಳವಾದ ಊಟದ ಮೆನು ಬಳ್ಳಾರಿ ಜೈಲಿನಲ್ಲಿ ಇರುತ್ತದೆ.
ಉಪಹಾರಕ್ಕೆ ಉಪ್ಪಿಟ್ಟು, ಒಗ್ಗರಣೆ ಅವಲಕ್ಕಿ, ಬಿಸಿಬೇಳೆ ಬಾತ್, ಚಿತ್ರಾನ್ನ ಸೇರಿದಂತೆ ಸ್ಥಳೀಯರ ಆಯ್ಕೆಯ ಖಾದ್ಯ ಇರುತ್ತದೆ. ಮಧ್ಯಾಹ್ನದಊಟಕ್ಕೆ ರಾಗಿಮುದ್ದೆ, ಚಪಾತಿ, ಜೋಳದ ರೊಟ್ಟಿ, ಸಜ್ಜಿ ರೊಟ್ಟಿ ಕೊಡಲಾಗುತ್ತದೆ. ಬಳ್ಳಾರಿಯ ಜನರ ಸ್ಥಳೀಯ ಊಟ ಜೋಳ, ಸಜ್ಜಿ ರೊಟ್ಟಿಯೇ ಆಗಿದೆ. ದರ್ಶನ್, ರೊಟ್ಟಿ, ಚಪಾತಿ ಅಥವಾ ಮುದ್ದೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು.
ಇನ್ನು ರಾತ್ರಿ ವೇಳೆ ಅನ್ನ- ಸಾಂಬಾರ್ ಇರುತ್ತದೆ. ಮಂಗಳವಾರಕ್ಕೊಮ್ಮೆ ಮೊಟ್ಟೆ ನೀಡಲಾಗುತ್ತದೆ. ಪ್ರತಿ ಭಾನುವಾರ ಮಾಂಸಾಹಾರ ನೀಡಲಾಗುತ್ತದೆ. ಇದೇ ಮೆನು ದರ್ಶನ್ ಗೂ ಇರಲಿದೆ.
ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಕೈದಿಗಳೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದರು. ಹೀಗಾಗಿ ಅಲ್ಲಿ ಓಡಾಡಿಕೊಂಡಿದ್ದರು. ಆದರೆ, ಈಗ ಬಳ್ಳಾರಿ ಜೈಲಿನಲ್ಲಿ ಮುಂದಿನ ದಿನಗಳನ್ನು ಸಾಗಿಸಬೇಕಿದೆ.