ಬಳ್ಳಾರಿ: ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ದರ್ಶನ್ ಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿದ್ದ ವಿಷಯ ಬಹಿರಂಗವಾಗುತ್ತಿದ್ದಂತೆ ಈಗ ಸಂಕಷ್ಟ ಎದುರಾಗಿದೆ. ರೌಡಿಶೀಟರ್ ಗಳ ಜೊತೆ ಸೇರಿಕೊಂಡು ಸೆರೆಮನೆಯಲ್ಲಿ ಐಶಾರಾಮಿ ಜೀವನ ನಡೆಸುತ್ತಿರುವ ದರ್ಶನ್ ಮತ್ತು ಅವರ ಗ್ಯಾಂಗ್ ಸದಸ್ಯರನ್ನು ಬಳ್ಳಾರಿ (Ballari Central Jail) ಸೇರಿದಂತೆ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.
ಆದರೆ, ಪವಿತ್ರಾಗೌಡ ಮಾತ್ರ ಬೆಂಗಳೂರು ಜೈಲಿನಲ್ಲಿ ಇರಲಿದ್ದಾರೆ. ದರ್ಶನ್ ಗ್ಯಾಂಗ್ ಬೇರೆ ಜೈಲಿಗೆ ಹೋಗುವವರೆಗೂ ಬೆಂಗಳೂರಿನ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಪೊಲೀಸರು ಕೋರ್ಟ್ ಅನುಮತಿ ಪಡೆದಿದ್ದಾರೆ. ಒಂದೊಮ್ಮೆ ತನಿಖೆಗೆ ಸಹಕರಿಸದಿದ್ದರೆ ವಶಕ್ಕೆ ಪಡೆದು ವಿಚಾರಣೆ ನಡೆಸಲೂ ತೀರ್ಮಾನಿಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಶಿಫ್ಟ್ ಆಗುತ್ತಿರುವ ಬಳ್ಳಾರಿ ಜೈಲು ಹದಿನಾರು ಎಕರೆ ಪ್ರದೇಶದಲ್ಲಿದೆ. ಬಿಗಿ ಭದ್ರತೆ ಹೊಂದಿದೆ. ವಿಶೇಷ ಭದ್ರತಾ ವಿಭಾಗದ ಸೆಲ್ ನಲ್ಲಿ ದರ್ಶನ್ ರನ್ನು ಇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಜೈಲಿನಲ್ಲಿ ಒಟ್ಟು 15 ಸೆಲ್ ಗಳಿದ್ದು, ಕೊನೆಯ ಸೆಲ್ ನ್ನು ದರ್ಶನ್ ಗೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ದರ್ಶನ್ ಭದ್ರತೆಗೆ ಈಗಾಗಲೇ ಮೂವರು ಸಿಬ್ಬಂದಿ ನಿಯೋಜಿಸಲಾಗಿದೆ. ಬಾಡಿವೋರ್ನ್ ಕ್ಯಾಮೆರಾ ಹಾಗೂ ಸಿಸಿಟಿವಿಯಲ್ಲಿ ಕಣ್ಗಾವಲಿರುವ ಸೆಲ್ ನಲ್ಲಿ ದರ್ಶನ್ ಇರಲಿದ್ದಾರೆ. ಭದ್ರತೆಗೆ ನಿಯೋಜನೆಯಾಗುವ ಸಿಬ್ಬಂದಿಗೆ ಬಾಡಿವೋರ್ನ್ ಕ್ಯಾಮೆರಾ ಕಡ್ಡಾಯವಾಗಿರಲಿದೆ. ಈ ಜೈಲಿನಲ್ಲಿ ಒಟ್ಟು 385 ಕೈದಿಗಳಿದ್ದು, ಹರ್ಷ ಮರ್ಡರ್ ಕೇಸ್ ಮತ್ತು ಪ್ರವೀಣ್ ಪೂಜಾರಿ ಮರ್ಡರ್ ಕೇಸ್ ಆರೋಪಿಗಳು ಬಳ್ಳಾರಿ ಜೈಲಿನಲ್ಲಿದ್ದಾರೆ.
ಹೃದಯ ಭಾಗದಲ್ಲಿರುವ ಬಳ್ಳಾರಿ ಕೇಂದ್ರ ಕಾರಾಗೃಹ ಸುಮಾರು ಸಾವಿರದಷ್ಟು ಕೈದಿಗಳ ಸಾಮರ್ಥ್ಯ ಹೊಂದಿದೆ. ಈಗ ಅಲ್ಲಿ ವಿಚಾರಣಾಧೀನ, ಸಜಾ ಸಂಬಂಧಿ ಸೇರಿದಂತೆ ಒಟ್ಟು 385 ಕೈದಿಗಳಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ 5 ಬ್ಲಾಕ್‌ಗಳಿವೆ. ಸಜಾ ಸಂಬಂಧಿಗಳಿಗೆ 200 ಪ್ರತ್ಯೇಕ ಸೆಲ್ ಗಳಿವೆ. ವಿಐಪಿಗಳನ್ನು ಇರಿಸಲು ‘ಹೈ ಸೆಕ್ಯೂರಿಟಿ’ ಸೌಲಭ್ಯವುಳ್ಳ ಸೆಲ್ ಗಳು ಕೂಡ ಇವೆ. ನೀರು, ಶೌಚಾಲಯ ಸೌಲಭ್ಯ ಹೊಂದಿವೆ.