ಬೆಂಗಳೂರು: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್ ಹಾಗೂ ರೌಡಿ ಶೀಟರ್ ಗಳು ಹರಟೆ ಹೊಡೆಯುತ್ತ ಕುಳಿತಿರುವ ಫೋಟೋವನ್ನು ವಿಲ್ಸನ್ ಗಾರ್ಡನ್ ನಾಗನ ಸಹಚರನೇ ಕ್ಲಿಕ್ಕಿಸಿದ್ದಾನೆ ಎಂದು ತಿಳಿದು ಬಂದಿದೆ.
ಕುರ್ಚಿಯಲ್ಲಿ ಕುಳಿತು ಸಿಗರೇಟ್ ಸೇವಿಸುತ್ತಾ ಹರಟುವ ಫೋಟೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದ ವ್ಯಕ್ತಿ ರೌಡಿ ಶೀಟರ್ ವೇಲು ಎನ್ನಲಾಗಿದೆ. ಸದ್ಯ ಇದಕ್ಕೆ ಸಂಬಂಧಿಸಿದಂತೆ ಆತನ ಮೇಲೂ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ. ಈತ ಕೂಡ ವಿಲ್ಸನ್ ಗಾರ್ಡನ್ ನಾಗನ ಸಹಚರ. ವೇಲು ಕೂಡ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದಾನೆ.
ಆ.22ರಂದು ಸಂಜೆ ಕೊಲೆ ಆರೋಪಿ ನಟ ದರ್ಶನ್, ಸಹಚರ ನಾಗರಾಜ್, ರೌಡಿ ಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗ ಹಾಗೂ ರೌಡಿ ಕುಳ್ಳ ಸೀನ ಜೈಲಿನ ಆವರಣದಲ್ಲಿ ಕುರ್ಚಿಯಲ್ಲಿ ಕುಳಿತು ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದರ್ಶನ್ ಒಂದು ಕೈಯಲ್ಲಿ ಸಿಗರೇಟ್ ಮತ್ತೊಂದು ಕೈಯಲ್ಲಿ ಟೀ ಕಪ್ ಹಿಡಿದು ಚರ್ಚೆ ನಡೆಸಿದ್ದರು. ಈ ವೇಳೆ ರೌಡಿ ವೇಲು ಫೋಟೋ ತೆಗೆದು ತನ್ನ ಪತ್ನಿಗೆ ವಾಟ್ಸಾಪ್ ನಲ್ಲಿ ಕಳುಹಿಸಿದ್ದಾನೆ.
ದರ್ಶನ್, ವಿಲ್ಸನ್ ಗಾರ್ಡನ್ ನಾಗ ಅವರನ್ನು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದ. ನಂತರ ಆ ಪತ್ನಿ ಇದನ್ನು ಬೇರೆಯವರಿಗೆ ಶೇರ್ ಮಾಡಿರಬಹುದು ಎನ್ನಲಾಗಿದೆ. ಈ ಕುರಿತು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಜೈಲಿನಲ್ಲಿ ಈ ರೀತಿ ಐಷಾರಾಮಿ ಜೀವನ ಸಾಗಿಸುತ್ತಾರೆ ಎಂಬುವುದು ಗೊತ್ತಾಗುತ್ತಿದ್ದಂತೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರಕ್ಕೂ ಇದು ಮುಜುಗರ ಸೃಷ್ಟಿಸಿದೆ. ಹೀಗಾಗಿ ಸಿಎಂ ಗರಂ ಆಗಿ, ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡುವಂತೆ ಸೂಚಿಸಿದ್ದರು. ಕೋರ್ಟ್ ಕೂಡ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಒಪ್ಪಿಗೆ ಸೂಚಿಸಿದೆ. ಹೀಗಾಗಿ ದರ್ಶನ್ ಆಂಡ್ ಗ್ಯಾಂಗ್ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಆಗಿದೆ.