ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ವಿಶೇಷ ಆತಿಥ್ಯ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈಗ ಮತ್ತೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜೈಲರ್ ಪರಮೇಶ ನಾಯಕ್. ಅಸಿಸ್ಟೆಂಟ್ ಜೈಲರ್ ಕೆ.ಪಿ.ರಾಯಮಾನೆ ಹಾಗೂ ವಾರ್ಡರ್ ಸುದರ್ಶನ್ ಅಮಾನತು ಆಗಿರುವ ಅಧಿಕಾರಿಗಳು. ಪರಪ್ಪನ ಅಗ್ರಹಾರ ಜೈಲಿನಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಇನ್ನಿತರರ ಜೊತೆ ನಟ ದರ್ಶನ್ ಕುಳಿತು ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ಕುಳಿತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಹೀಗಾಗಿ ಜೈಲಿನಲ್ಲಿ ದರ್ಶನ್ ಹಾಗೂ ರೌಡಿ ಶೀಟರ್ ಗೆ ರಾಜಾತಿಥ್ಯ ಸಿಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದು ಸರ್ಕಾರದ ಮುಜುಗರಕ್ಕೆ ಕಾರಣವಾಗಿತ್ತು. ಹೀಗಾಗಿ ಸಿಎಂ ಗರಂ ಆಗಿದ್ದರು. ಕೋರ್ಟ್ ಕೂಡ ಆರೋಪಿಗಳನ್ನು ಸ್ಥಳಾಂತರಿಸಲು ಅನುಮತಿ ನೀಡಿದೆ.
ನಟ ದರ್ಶನ್ ಜೈಲು ಫೋಟೊ ವೈರಲ್ ಆಗುತ್ತಿದ್ದಂತೆ ಸರ್ಕಾರವು ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆಯಿತು. ಇದರ ಬೆನ್ನಲ್ಲೇ ಜೈಲಿನಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಲ್ಲಿ 9 ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕ ವಿ.ಶೇಷಮೂರ್ತಿ ಕೂಡ ಅಮಾನತುಗೊಂಡಿದ್ದರು. ಈಗ ಅವರ ಸ್ಥಾನಕ್ಕೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕರಾಗಿ ಸುರೇಶ್ ನೇಮಕವಾಗಿದ್ದಾರೆ.