ರೇಣುಕ ಸ್ವಾಮಿ ಕೊಲೆ ಪ್ರಕರಣದ ಮೊದಲ ಆರೋಪಿ ಪವಿತ್ರಾಗೌಡ ಜಾಮೀನಿಗಾಗಿ ಯತ್ನಿಸುತ್ತಿದ್ದಾರೆ. ಮಂಗಳವಾರ ಕೂಡ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಪವಿತ್ರಾಗೌಡ ಜಾಮೀನು ಅರ್ಜಿಯ ವಿಚಾರಣೆ ನಡೆದಿದೆ.
ಅಲ್ಲದೇ, ನಾಳೆಗೆ ವಿಚಾರಣೆ ಮುಂದೂಡಿಕೆಯಾಗಿದ್ದು, ಮಧ್ಯಾಹ್ನ ವಿಚಾರಣೆ ನಡೆಯಲಿದೆ. ಪವಿತ್ರಾಗೌಡ ಪರ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮಾಡಿದ್ದಾರೆ.
ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ. ಸಂಪೂರ್ಣ ಕೇಸ್ ನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುವುದು ನಂತರ ತಿಳಿಯಲಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ವಕೀಲರು ಮನವಿ ಮಾಡಿದ್ದಾರೆ.
ಸದ್ಯದ ಸ್ಥಿತಿ ನೋಡಿದರೆ, ಸದ್ಯಕ್ಕೆ ದರ್ಶನ್ ಗೆ ಜಾಮೀನು ಸಿಗುವುದು ಕಷ್ಟ ಆಗಿದೆ. ಪೊಲೀಸರು ಚಾರ್ಜ್ಶೀಟ್ ಸಲ್ಲಿಸಬೇಕು ಎನ್ನುವಷ್ಟರಲ್ಲಿ ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಫೋಟೋ ಮತ್ತು ವಿಡಿಯೋಗಳು ಲೀಕ್ ಆಗಿವೆ. ಜೈಲಿನ ನಿಯಮಗಳನ್ನು ಉಲ್ಲಂಘಿಸಿ, ದರ್ಶನ್ಗೆ ರಾಜಾತಿಥ್ಯ ನೀಡಲಾಗಿದೆ ಎಂಬುವುದಕ್ಕೆ ಈ ಫೋಟೋ ಸಾಕ್ಷಿ ಒದಗಿಸಿವೆ. ಹೀಗಾಗಿ ಮತ್ತೆ ಮೂರು ಎಫ್ ಐಆರ್ ಗಳು ದಾಖಲಾಗಿವೆ. ಅವುಗಳಲ್ಲಿ 2ರಲ್ಲಿ ದರ್ಶನ್ ಎ1 ಆಗಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ಸಿಗುವುದು ಕಷ್ಟ ಎನ್ನಲಾಗುತ್ತಿದೆ.