ಮಧುಗಿರಿ : ಶ್ರಾವಣ ಮಾಸದ ಪ್ರಸಾದ ಸೇವಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಬುಳ್ಳಾಸಂದ್ರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದಲ್ಲಿನ ಮುತ್ತರಾಯಸ್ವಾಮಿ ಜಾತ್ರೆಗಾಗಿ ಮಾಡಿದ್ದ ಅಡುಗೆ ಸೇವಿಸಿದ ನಂತರ ವಾಂದಿ-ಭೇದಿ ಕಾಣಿಸಿಕೊಂಡ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಜಾತ್ರೆಗಾಗಿ ಮಾಡಿದ್ದ ದೇವರ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದರು ಎನ್ನಲಾಗಿದೆ. ಆದರೆ, ಆರೋಗ್ಯಾಧಿಕಾರಿಗಳು ಮಾತ್ರ ಇದನ್ನು ತಳ್ಳಿ ಹಾಕಿದ್ದು, ಇಬ್ಬರು ವಯೋಸಹಜವಾಗಿ ಹಾಗೂ ಮತ್ತೊಬ್ಬ ಮಹಿಳೆ ವಾಂತಿ-ಭೇದಿಯಿಂದ ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ.
ಶ್ರಾವಣ ಶನಿವಾರದಂದು ಗ್ರಾಮದ ಮುತ್ತರಾಯಸ್ವಾಮಿ, ಕರಿಯಮ್ಮ ದೇವಿ ಮತ್ತು ಭೂತಪ್ಪ ಸ್ವಾಮಿ ದೇವರಿಗೆ ಹರಿಸೇವೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿ ಮೂರು ವರ್ಷಕ್ಕೊಮ್ಮೆ ಈ ಹರಿಸೇವೆ ಕಾರ್ಯಕ್ರಮ ಮಾಡಲಾಗುತ್ತದೆ. ಹೀಗಾಗಿ ದೇವಸ್ಥಾನದಲ್ಲಿ ಪ್ರಸಾದವಾಗಿ ಅನ್ನ ಸಾಂಬಾರ್, ಹೆಸರು ಬೇಳೆ ಪಾಯಸ ಮಾಡಲಾಗಿತ್ತು. ಈ ಮೂವರು ಪ್ರಸಾದ ಸ್ವೀಕರಿಸಿದ್ದರು ಎನ್ನಲಾಗಿದೆ.
ಪ್ರಸಾದ ಸೇವಿಸಿ ಮನೆಗೆ ಮರಳಿದ ನಂತರ ಕೆಲವರಿಗೆ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ತಿಮ್ಮಕ್ಕ (90) ಹಾಗೂ ಗಿರಿಯಮ್ಮ (80) ಎಂಬುವರು ಅದೇ ರಾತ್ರಿ ಸಾವನ್ನಪ್ಪಿದ್ದರು. ವಾಂತಿ-ಭೇದಿಯಿಂದ ಅಸ್ವಸ್ಥರಾಗಿದ್ದ ಕಾಟಮ್ಮ (40) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಕಾಟಮ್ಮ ಸಾವಿನ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನ ನಡೆಸಿದ್ದಾರೆ. ಸುಮಾರು 18 ರಿಂದ 20 ಜನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.