ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ವಿಷಯ ಬಹಿರಂಗವಾಗುತ್ತಿದ್ದಂತೆ 7 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜೈಲಿನ ಆವರಣದಲ್ಲಿ ಕಾಫಿ, ಸಿಗರೇಟ್ ಸೇದುತ್ತಾ ಉಳಿದ ರೌಡಿ ಶೀಟರ್ಗಳ ಜೊತೆ ಕುಳಿತು ದರ್ಶನ್ ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿತ್ತು. ಇದರ ಮಧ್ಯೆ ವಿಡಿಯೋ ಕಾಲ್ ನಲ್ಲಿಯೂ ದರ್ಶನ್ ಮಾತನಾಡಿದ್ದರು. ಈಗ ದರ್ಶನ್ ರನ್ನು ನಿಯಂತ್ರಣಕ್ಕೆ ತರಲು ಜೈಲಧಿಕಾರಿಗಳು ಬೇರೆ ಜೈಲಿಗೆ ಶಿಫ್ಟ್ ಮಾಡುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಜೈಲಿನಲ್ಲಿ ಸೊರಗಿ ಹೋಗಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಅಲ್ಲದೇ, ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ತುಂಬಾ ಪಶ್ಚಾತ್ತಾಪ ಪಡುತ್ತಿದ್ದಾರೆ ಎನ್ನಲಾಗಿತ್ತು. ಆದರೆ, ಇದೆಲ್ಲವೂ ಸುಳ್ಳು ಎಂಬುವುದು ಸ್ಪಷ್ಟವಾಗಿದೆ.
ದರ್ಶನ್ ಜೈಲಿನಲ್ಲಿ ಹಾಯಾಗಿಯೇ ಇದ್ದಾರೆ. ದರ್ಶನ್ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲಿಯೇ ದರ್ಶನ್ ಹಾಗೂ ಅವರ ತಂಡವನ್ನು ಬೇರೆ ಜೈಲ್‌ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ದರ್ಶನ್ ಕುಳಿತು ಹರಟೆ ಹೊಡೆದಿದ್ದಾರೆ. ದರ್ಶನ್ ಗೆ ಈ ಎಲ್ಲ ವ್ಯವಸ್ಥೆಯನ್ನು ನಾಗನೇ ಮಾಡುತ್ತಿದ್ದಾನೆ ಎನ್ನಲಾಗಿದೆ. ಆತನಿಗೆ ಸಾಕಷ್ಟು ಕಾಂಟ್ಯಾಕ್ಟ್ ಇರುವುದರಿಂದ ದರ್ಶನ್ಗೆ ಸಹಾಯ ಮಾಡುತ್ತಿದ್ದಾನೆ. ಈ ಕಾರಣಕ್ಕೆ ರೌಡಿ ನಾಗನ ಟೀಂ ಅಥವಾ ದರ್ಶನ್ ಟೀಂ ಬದಲಾವಣೆಗೆ ಚಿಂತನೆ ನಡೆಸಲಾಗಿದೆ. ಹೀಗಾಗಿ ಇಂದು ಸಂಜೆ ದರ್ಶನ್ ನನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಈ ಘಟನೆಗೆ ಸಂಬಂಧಿಸಿದಂತೆ 7 ಜನ ಅಧಿಕಾರಿಗಳನ್ನು ಸರ್ಕಾರ ಸಸ್ಪೆಂಡ್ ಮಾಡಿದೆ.