ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದ್ದು, ಇದಕ್ಕೆ ಸಂಬಂಧಿಸಿದ ಫೋಟೋವೊಂದು ವೈರಲ್ ಆಗಿದೆ.
ದರ್ಶನ್ ಅವರ ಒಂದು ಫೋಟೋ ಈಗ ವೈರಲ್ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಇದರಲ್ಲಿದೆ. ವೈರಲ್ ಆಗಿರುವ ಫೋಟೋದಿಂದಾಗಿ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿವೆ. ಕೊಲೆ ಆರೋಪದಲ್ಲಿ ದರ್ಶನ್ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಅಲ್ಲಿ ಸ್ಪೆಷಲ್ ಬ್ಯಾರಕ್ ನಲ್ಲಿ ಇರಿಸಲಾಗಿದೆ. ಆದರೆ, ಅವರು ಅಲ್ಲಿ ಆರಾಮಾಗಿ ದಿನ ಕಳೆಯುತ್ತಿದ್ದಾರೆ ಎಂಬ ಸಂಶಯ ಮೂಡುತ್ತಿದೆ.
ದರ್ಶನ್ ಅವರು ಸ್ಪೆಷಲ್ ಬ್ಯಾರಕ್ನಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ ಮಗ್ ಹಿಡಿದುಕೊಂಡು ಕುಳಿತಿದ್ದಾರೆ. ಕೈಯಲ್ಲಿ ಸಿಗರೇಟ್ ಕೂಡ ಇದೆ. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವೆಲ್ಲ ಸೌಕರ್ಯಗಳನ್ನು ನಟನಿಗೆ ನೀಡಿರಹುದು ಎಂಬ ಪ್ರಶ್ನೆಯನ್ನು ಈ ಫೋಟೋ ಹುಟ್ಟು ಹಾಕಿದೆ. ಜೈಲು ಅಧಿಕಾರಿಗಳ ನಡೆಯ ಬಗ್ಗೆ ಕೂಡ ಅನುಮಾನ ವ್ಯಕ್ತವಾಗುತ್ತಿದೆ.
ಹೈ ಪ್ರೊಫೈಲ್ ಕೇಸ್ ಆದ ಕಾರಣ ಎಲ್ಲರ ಗಮನ ಇದರ ಮೇಲಿದೆ. ತನಿಖೆಯ ಪ್ರತಿ ಹಂತವೂ ಕೂಡ ಸುದ್ದಿ ಆಗುತ್ತಿದೆ. ದರ್ಶನ್ ಹಾಗೂ ಗ್ಯಾಂಗ್ ವಿರುದ್ಧ ಈಗಾಗಲೇ ಅನೇಕ ಬಗೆಯ ಸಾಕ್ಷಿಗಳು ಸಿಕ್ಕಿವೆ. ಕೆಲವೇ ದಿನಗಳಲ್ಲಿ ಪೊಲೀಸರು ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆದರೆ, ಈ ಮಧ್ಯೆ ಫೋಟೋ ವೈರಲ್ ಆಗಿದ್ದು, ಇದು ಹಲವಾರು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ. ದರ್ಶನ್ ಜೈಲಿನಲ್ಲಿ ರೌಡಿಯೊಂದಿಗೆ ಹರಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಜೈಲಿನಲ್ಲಿ ದರ್ಶನ್ ತಲೆ ಬೋಳಿಸಿಕೊಂಡಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈ ಫೋಟೋ ನೋಡಿದ ಬಳಿಕ ಅದು ಖಚಿತವಾಗಿದೆ. ವಿಗ್ ಕೂಡ ತೆಗೆಸಲಾಗಿದೆ. ಈಗಾಗಲೇ ಅನೇಕರು ಜೈಲಿಗೆ ಭೇಟಿ ನೀಡಿ ದರ್ಶನ್ ರನ್ನು ಭೇಟಿ ಮಾಡಿ ಬಂದಿದ್ದಾರೆ. ಹಾಗಾದರೆ, ಜೈಲಿನಲ್ಲಿ ದರ್ಶನ್ ಐಷಾರಾಮಿಯಾಗಿಯೇ ಬದುಕುತ್ತಿದ್ದಾರಾ?