ಬೆಂಗಳೂರು: ಜಿಂದಾಲ್ ಕಂಪನಿಗೆ 3,667ಎಕರೆ ಭೂಮಿ ಮಾರಾಟ ಮಾಡಲು ಸಿಎಂ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸುತ್ತಿದ್ದಂತೆ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪರ-ವಿರೋಧ ಚರ್ಚೆ ತಾರಕಕ್ಕೆ ಏರಿಕೆ ಕಂಡಿದೆ.
ಭೂಮಿ ಮಾರಾಟ ನಿರ್ಧಾರವನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳುತ್ತಿದ್ದರೆ, ಬಿಜೆಪಿ ನಾಯಕರು ಇದು ಒಂದು ಹಗರಣ ಎಂದು ಆರೋಪಿಸಿ ಟೀಕೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರವು ಹಗರಣದಲ್ಲಿ ಮುಳುಗಿದ್ದು, ಈಗ ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಭೂಮಿ ನೀಡುವ ಮೂಲಕ ದೊಡ್ಡ ಭ್ರಷ್ಟಾಚಾರ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಬಳ್ಳಾರಿ ಜಿಲ್ಲೆಯಲ್ಲಿ ಖನಿಜ ಭರಿತ ಜಾಗ ಇರುವ ಸಂಡೂರಿನಲ್ಲಿ ಸುಮಾರು 3,667 ಎಕರೆಯ ಪೈಕಿ 2 ಸಾವಿರ ಎಕರೆಯನ್ನು ಪ್ರತಿ ಎಕರೆಗೆ 1.20 ಲಕ್ಷ ರೂ.ಗೆ ಮತ್ತು 1,667 ಎಕರೆಯನ್ನು 1.50 ಲಕ್ಷ ರೂ.ಗೆ ರು.ಗೆ ವಿರಿಸುವ ನಿರ್ಧಾರವನ್ನು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯನ್ನು ಕೇವಲ 20 ಕೋಟಿ ರೂ.ಗೆ ಮಾರಾಟ ಮಾಡುತ್ತಿದೆ. ಇದರ ಹಿಂದೆ ದೊಡ್ಡ ಭ್ರಷ್ಟಾಚಾರವೇ ಅಡಗಿದೆ ಎಂದು ಅರವಿಂದ್ ಬೆಲ್ಲದ್ ಆರೋಪಿಸಿದ್ದಾರೆ.
ಸಿಎಂ ದೊಡ್ಡ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಹೀಗಾಗಿ ಅವರು ಬೇಗನೆ ಮನೆಗೆ ಹೋಗುವ ಸಂದರ್ಭ ಬಂದಂತಾಗಿದೆ. ಸಿದ್ದರಾಮಯ್ಯನವರಿಗೆ ಕುರ್ಚಿ ಹೋಗುವ ಕುರಿತು ಗೊತ್ತಾಗಿದೆ. ಹೀಗಾಗಿ ಇದ್ದ ಸಮಯದಲ್ಲಿ ಲೂಟಿ ಮಾಡಿ ಹೋಗಬೇಕು ಎಂದು ಈ ರೀತಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.