ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಯುವರಾಜ್ ಸಿಂಗ್ (Yuvraj Singh) ಐಪಿಎಲ್ (IPL 2025)ನಲ್ಲಿ ಮತ್ತೊಂದು ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿ ನಿಂತಿದ್ದಾರೆ.
ಐಪಿಎಲ್ 2025 ರಲ್ಲಿ ಯುವರಾಜ್ ಸಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಈಗಾಗಲೇ ಯುವರಾಜ್ ಸಿಂಗ್ ಅವರೊಂದಿಗೆ ಮಾತುಕತೆ ನಡೆದಿದೆ ಎನ್ನಲಾಗಿದ್ದು, ಯುವರಾಜ್ ಸಿಂಗ್ ಕಡೆಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ ಎನ್ನಲಾಗಿದೆ.
ಹೀಗಾಗಿ ಮುಂಬರುವ ಐಪಿಎಲ್ ನಲ್ಲಿ ಯುವರಾಜ್ ಸಿಂಗ್ ದೆಹಲಿ ತಂಡದ ಕೋಚ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದಕ್ಕೂ ಮುನ್ನ ಯುವರಾಜ್ ಸಿಂಗ್ ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಟೀಮ್ ಇಂಡಿಯಾದ ಮಾಜಿ ಆಲ್ ರೌಂಡರ್ ನನ್ನು ಕೂರಿಸುವ ಯತ್ನ ಮಾಡುತ್ತಿದೆ. ಇದಕ್ಕೂ ಮುನ್ನ ಈ ತಂಡದ ಮುಖ್ಯ ಕೋಚ್ ಆಗಿ ರಿಕಿ ಪಾಂಟಿಂಗ್ ಕಾರ್ಯ ನಿರ್ವಹಿಸಿದ್ದರು. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಅವರನ್ನು ಕೋಚ್ ಸ್ಥಾನದಿಂದ ತೆಗೆದು ಹಾಕಲಾಗಿದೆ. ಈಗ ಈ ಸ್ಥಾನಕ್ಕೆ ಯುವರಾಜ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ.
ಯುವರಾಜ್ ಐಪಿಎಲ್ ಅಥವಾ ದೇಶೀಯ ಕ್ರಿಕೆಟ್‌ನಲ್ಲಿ ಯಾವುದೇ ಪೂರ್ವ ಕೋಚಿಂಗ್ ಅನುಭವ ಹೊಂದಿಲ್ಲ. ಆದರೆ, ಪಂಜಾಬ್ನ ಯುವ ಆಟಗಾರಿಗೆ ವಿಶೇಷ ತರಬೇತಿಗಳನ್ನು ನೀಡುತ್ತಿದ್ದರು. ಸಿಂಗ್ ಗರಡಿಯಲ್ಲಿ ಪಳಗಿದ ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ ಇದೀಗ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ. 2007ರ ಮತ್ತು 2011 ರಲ್ಲಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಡುವಲ್ಲಿ ಯುವರಾಜ್ ಸಿಂಗ್ ಪ್ರಮುಖ ಪಾತ್ರವಹಿಸಿದ್ದರು. ಈ ಎಲ್ಲಾ ಕಾರಣಗಳಿಂದ ಚಾಂಪಿಯನ್ ಕ್ರಿಕೆಟಿಗನನ್ನು ಕೋಚ್ ಆಗಿ ನೇಮಿಸಲು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಮುಂದಾಗಿದೆ.