ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆ ಟಿಕೆಟ್ ಗಾಗಿ ಜೆಡಿಎಸ್ ಹಾಗೂ ಯೋಗೇಶ್ವರ್ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಸಿಪಿ ಯೋಗೇಶ್ವರ್ ಅವರು ಹೈಕಮಾಂಡ್ ಪರೇಡ್ ನಡೆಸುತ್ತಿದ್ದರೆ, ಕುಮಾರಸ್ವಾಮಿ ದೆಹಲಿಯಲ್ಲಿದ್ದುಕೊಂಡೇ ತಂತ್ರ ಹೆಣೆಯುತ್ತಿದ್ದಾರೆ. ಹೀಗಾಗಿ ಇಬ್ಬರು ನಾಯಕರ ಮಧ್ಯೆಯೇ ಫೈಟ್ ನಡೆಯುತ್ತಿದೆ.
ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದ ದೋಸ್ತಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿಯಿಂದ ಅವರು ಕಣಕ್ಕಳಿಯಲು ಸಾಕಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಕುಮಾರಸ್ವಾಮಿ ತಮ್ಮ ಕ್ಷೇತ್ರವನ್ನು ತಮ್ಮ ಪಕ್ಷದಲ್ಲಿಯೇ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ ಸಿಪಿ ಯೋಗೇಶ್ವರ್ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಮನವೊಲಿಸಲು ಯತ್ನಿಸುತ್ತಿದ್ದಾರೆ. ಆದರೂ ಅವರಿಗೆ ಬಿಜೆಪಿಯಿಂದ ಸಪೋರ್ಟ್ ಸಿಗುತ್ತಿಲ್ಲ. ಬಿಜೆಪಿಯ ನಾಯಕರು ಕೂಡ ಯೋಗೇಶ್ವರ್ ಗೆ ಬಹಿರಂಗವಾಗಿ ಸಪೋರ್ಟ್ ಮಾಡುತ್ತಿಲ್ಲ. ಹೀಗಾಗಿ ಟಿಕೆಟ್ ಜೆಡಿಎಸ್ ಪಾಲಾಗಬಹುದು ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.
ಕುಮಾರಸ್ವಾಮಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕಿಳಿಸುತ್ತಾರೆ ಎಂಬ ನಿರೀಕ್ಷೆ ಇದೆ. ಆದರೆ, ಇದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ನಿಖಿಲ್ ಅವರು ನಾನು ಈ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂದೂ ಹೇಳುತ್ತಿದ್ದಾರೆ. ಈ ಮದ್ಯೆ ಕಾರ್ಯಕರ್ತ ಜಯಮುತ್ತು ಅವರ ಹೆಸರು ಮುನ್ನಲೆಗೆ ಬರುತ್ತಿದೆ. ನಿಖಿಲ್ ಕುಮಾರಸ್ವಾಮಿಗೆ ಟಿಕೆಟ್ ಕೊಟ್ಟರೆ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕಿಳಿಸಿದರೆ ಅದು ಚುನಾವಣೆಯಲ್ಲಿ ಹಿನ್ನಡೆ ಆಗಬಹುದು ಎಂಬ ಆತಂಕ ದಳಪತಿಗಳಿಗೆ ಇದೆ.
ನಿಖಿಲ್ ಸ್ಪರ್ಧಿಸಿ ಮತ್ತೆ ಸೋತಲ್ಲಿ ಅವರ ರಾಜಕೀಯ ಭವಿಷ್ಯದ ಮೇಲೆ ಅದು ಪರಿಣಾಮ ಬೀರಲಿದೆ. ಹೀಗಾಗಿ ಅಳೆದೂ ತೂಗಿ ಹೆಜ್ಜೆ ಇಡಲು ಕುಮಾರಸ್ವಾಮಿ ಮುಂದಾಗಿದ್ದಾರೆ. ಬಿಜೆಪಿಗೆ ಕ್ಷೇತ್ರ ಬಿಟ್ಟುಕೊಟ್ಟು ಸಿಪಿ ಯೋಗೇಶ್ವರ್ ಸ್ಪರ್ಧೆಗೆ ಒಪ್ಪಿಗೆ ನೀಡಿದರೆ, ಪಕ್ಷಕ್ಕೆ ಕೂಡ ನೆಲೆ ಇಲ್ಲದಂತಾಗುತ್ತದೆ. ಆದರೆ, ಚನ್ನಪಟ್ಟಣ ಯಾರ ಪಾಲಾಗಲಿದೆ ಕಾಯ್ದು ನೋಡಬೇಕಿದೆ.