ಶಿವಮೊಗ್ಗ: ಪೊಲೀಸರು ಎಷ್ಟೇ ಕಠಿಣ ನಿಯಮ ಜಾರಿಗೆ ತಂದರೂ ಹಲವೆಡೆ ಬಡ್ಡಿ ವ್ಯವಹಾರ ಎಗ್ಗಿಲ್ಲದೆ ನಡೆಯುತ್ತಿದೆ. ಈಗ ಜಿಲ್ಲೆಯಲ್ಲಿ ಮೀಟರ್ ಬಡ್ಡಿ ದಂಧೆಗೆ ಯುವಕ ಬಲಿಯಾಗಿರುವ ಘಟನೆ ನಡೆದಿದೆ.
ಭದ್ರಾವತಿಯ ಪೇಪರ್ ಟೌನ್ ಬಡಾವಣೆಯ ಸ್ಟಿವನ್ (24) ನೇಣಿಗೆ ಶರಣಾಗಿರುವ ಯುವಕ. ಈ ಕುರಿತು ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಹೀಗಾಗಿ ಸ್ಥಳೀಯರು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ಜೊಸೆಫ್ ಆರು ಲಕ್ಷ ರೂ. ಹಣವನ್ನು ಮೀಟರ್ ಬಡ್ಡಿಯ ಹಾಗೆ ಸಾಲ ಪಡೆದಿದ್ದ. ಮೀಟರ್ ಬಡ್ಡಿ ತಿಂಗಳಿಗೆ ಕಟ್ಟಲು ಆಗದೇ ತಂದೆ ಜೊಸೇಫ್ ಮತ್ತು ಆತನ ಪತ್ನಿ ಸುನೀತಾ ಮನೆ ಬಿಟ್ಟು ಹೋಗಿದ್ದರು. ಪರಶುರಾಮ ಎನ್ನುವ ವ್ಯಕ್ತಿಯಿಂದ ಮೀಟರ್ ಬಡ್ಡಿ ಪಡೆದಿದ್ದರು. ಆದರೆ, ಬಡ್ಡಿಗೆ ಚಕ್ರಬಡ್ಡಿ ಬೆಳೆದು ಸಾಲ ಹೆಚ್ಚಾಗುತ್ತಾ ಹೋಗಿದೆ. ತಂದೆ ತಾಯಿ ಅಸಲು ಮತ್ತು ಬಡ್ಡಿ ಕೊಟ್ಟಿರಲಿಲ್ಲ. ಇದರಿಂದ ನಾಪತ್ತೆಯಾಗಿದ್ದ ತಂದೆ-ತಾಯಿ ಬಿಟ್ಟು ಅವರ ಮಗ ಸ್ಟಿವನ್ ಹಿಂದೆ ಮೀಟರ್ ಬಿಡ್ಡಿ ದಂಧೆ ಮಾಡುತ್ತಿದ್ದ ಪರಶುರಾಮ ಬಿದ್ದಿದ್ದ. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ಟಿವನ್ ಮೂರು ದಿನಗಳ ಹಿಂದೆ ಭದ್ರಾವತಿಗೆ ಬಂದಿದ್ದ. ಆದರೆ, ಈ ವೇಳೆ ಪರಶುರಾಮ ಹಣ ಬೇಕೆಂದು ಪೀಡಿಸಿದ್ದಾನೆ.
ಆತನ ಕಾಟ ತಾಳಲಾರದೆ ಸ್ಟಿವನ್ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.