ತಿರುವನಂತಪುರಂ: ಮಲಯಾಳಂ ಚಿತ್ರರಂಗದ ನಟ ನಿರ್ಮಲ್ ಬೆನ್ನಿ (Nirmal Benny) ಶುಕ್ರವಾರ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
37 ವರ್ಷದ ನಿರ್ಮಲ್ ಬೆನ್ನಿ ಹೃದಯಾಘಾತಕ್ಕೆ ಬಲಿಯಾಗಿರುವುದಕ್ಕೆ ಇಡೀ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ. 2013ರಲ್ಲಿ ತೆರೆಕಂಡ ಲಿಜೋ ಜೋಸ್ ಪೆಲ್ಲಿಶ್ಶೆರಿ ನಿರ್ದೇಶನದ ʼಅಮೆನ್ʼ ಚಿತ್ರದ ಕೊಚ್ಚಚ್ಚನ್ ಪಾತ್ರದ ಮೂಲಕ ನಿರ್ಮಲ್ ಖ್ಯಾತಿಯಾಗಿದ್ದರು. ಇಂದಿಗೂ ಅವರನ್ನು ಆ ಪಾತ್ರದ ಮೂಲಕವೇ ಜನರು ಗುರುತಿಸುತ್ತಿದ್ದರು.
ನಿರ್ಮಲ್ ಬೆನ್ನಿ ಅವರ ನಿಧನ ವಾರ್ತೆಯನ್ನು ಅವರ ಆಪ್ತ ಸ್ನೇಹಿತ ಮತ್ತು ನಿರ್ಮಾಪಕ ಸಂಜಯ್ ಪಡಿಯೂರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ʼʼಆತ್ಮೀಯ ಗೆಳೆಯನಿಗೆ ನೋವಿನೊಂದಿಗೆ ವಿದಾಯ. ʼಅಮೆನ್ʼ ಚಿತ್ರದ ಕೊಚ್ಚಚ್ಚನ್ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಿರ್ಮಲ್ ಬೆನ್ನಿ ನಾನು ನಿರ್ಮಿಸಿದ ʼದೂರಂʼ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೃದಯಾಘಾತದ ಕಾರಣ ಇಂದು ನಿಧನ ಹೊಂದಿದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾರೆ.
ಮೊದಲು ಹಾಸ್ಯ ನಟರಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬೆನ್ನಿ ನಿರ್ಮಲ್ ಯೂಟ್ಯೂಬ್ ಮತ್ತು ಸ್ಟೇಜ್ ಪ್ರೋಗ್ರಾಂ ಮೂಲಕ ಜನರ ಗಮನ ಸೆಳೆದಿದ್ದರು. ಆನಂತರ ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡರು. 2012ರಲ್ಲಿ ತೆರೆಕಂಡ ʼನವಾಗತರ್ಕ್ ಸ್ವಾಗತಂʼ ಸಿನಿಮಾದ ಮೂಲಕ ನಿರ್ಮಲ್ ಬೆನ್ನಿ ಮಾಲಿವುಡ್ ಪ್ರವೇಶಿಸಿದರು. ʼಅಮೆನ್ʼ, ʼದೂರಂʼ ಸೇರಿದಂತೆ 12 ವರ್ಷಗಳಲ್ಲಿ ಸುಮಾರು 5 ಚಿತ್ರಗಳಲ್ಲಿ ನಟಿಸಿದರು. ಸದ್ಯ ಅವರ ನಿಧನಕ್ಕೆ ಗಣ್ಯರು ಕಣ್ಣೀರು ಸುರಿಸುತ್ತಿದ್ದು, ಶಾಕ್ ಗೆ ಒಳಗಾಗಿದ್ದಾರೆ.