ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ರನ್ನು ಬೆಂಬಲಿಸಲು ಅಲ್ಲಿನ ಹಿಂದೂಗಳು ಮುಂದಾಗಿದ್ದಾರೆ.
ಅಮೆರಿಕದಲ್ಲಿರುವ ಕೆಲವು ಹಿಂದೂ ಸಂಘಟನೆಗಳು ‘ಕಮಲಾ ಹ್ಯಾರಿಸ್ ರಿಗಾಗಿ ಹಿಂದೂಗಳು’ ಎಂಬ ಗುಂಪು ರಚಿಸಲು ಮುಂದಾಗಿದ್ದಾರೆ. ಕಮಲಾ ಹ್ಯಾರಿಸ್ ಅವರು ಭಾರತಕ್ಕೆ ಹಾಗೂ ಅಮೆರಿಕ ದೇಶಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೇ ಒಳಿತು ಮಾಡಲಿದ್ದಾರೆ ಎಂದು ಹಿಂದೂ ಸಂಘಟನೆಗಳು ಅಭಿಪ್ರಾಯಪಟ್ಟಿದೆ.
ಕಮಲಾ ದೇವಿ ಹ್ಯಾರಿಸ್ ಅವರು ಅಮೆರಿಕದ 47ನೇ ಅಧ್ಯಕ್ಷರಾಗಲು ನಾವು ಅವರ ಬೆಂಬಲಕ್ಕೆ ನಿಂತಿದ್ದೇವೆ ಎಂದು ಹಿಂದೂ ಸಂಘಟನೆಯ ಗುಂಪು ಹೇಳಿಕೊಂಡಿದೆ. 59 ವರ್ಷ ವಯಸ್ಸಿನ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಗುರುವಾರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಸ್ಥಾನವನ್ನು ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ ಈ ರೀತಿ ಹಿಂದೂಗಳಿಂದ ಬೆಂಬಲ ಸಿಗುತ್ತಿದೆ.
ನಾವೆಲ್ಲರೂ ಸೇರಿ ಕಮಲಾ ಹ್ಯಾರಿಸ್ ಅವರನ್ನು ಗೆಲ್ಲಿಸಬೇಕಿದೆ. ಕೇವಲ ಅಮೆರಿಕ ದೇಶಕ್ಕೆ ಅಥವಾ ಭಾರತ ದೇಶಕ್ಕೆ ಮಾತ್ರ ಇದರಿಂದ ಒಳಿತಲ್ಲ. ಇಡೀ ವಿಶ್ವಕ್ಕೇ ಒಳಿತಾಗಲಿದೆ ಎಂದು ಗುಂಪಿನ ಸದಸ್ಯರು ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರು ಗೆಲುವು ಸಾಧಿಸಲು ಸರಳ ಮಾರ್ಗವಿದೆ. ಮತ್ತೊಬ್ಬ ಪ್ರತಿಸ್ಪರ್ಧಿಯನ್ನು ತಿರಸ್ಕರಿಸದೆ ನಾವು ಕೇವಲ ಕಮಲಾ ಹ್ಯಾರಿಸ್ ರನ್ನು ಬೆಂಬಲಿಸಬೇಕು. ಅಮೆರಿಕದಲ್ಲಿ ಇರುವ ಭಾರತೀಯ ಮತದಾರರು ಹಾಗೂ ಹಿಂದೂ ಸಮುದಾಯದವರು ತಪ್ಪದೇ ಮತದಾನ ಮಾಡಿ ಕಮಲಾ ಹ್ಯಾರಿಸ್ ರನ್ನು ಬೆಂಬಲಿಸಬೇಕು ಎಂದು ಕೂಡ ಗುಂಪಿನ ಸದಸ್ಯರು ಮನವಿ ಮಾಡಿದ್ದಾರೆ.
2024ರ ನವೆಂಬರ್ ನಲ್ಲಿ ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದಾರೆ. ಹಾಲಿ ಅಧ್ಯಕ್ಷ ಜೋ ಬೈಡನ್ ಹಲವು ಕಾರಣಗಳಿಂದಾಗಿ ಅಮೆರಿಕ ಅಧ್ಯಕ್ಷೀಯ ಚುನಾವಣಾ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಕಮಲಾ ಹ್ಯಾರಿಸ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದಾರೆ.