ಬೆಂಗಳೂರು: ಸರ್ಕಾರ ಎಷ್ಟೇ ನಿಯಮ ಜಾರಿಗೆ ತಂದರೂ ವಾಹನ ಸವಾರರು ಮಾತ್ರ ನಿಯಮ ಪಾಲಿಸುವುದಿಲ್ಲ. ಇದರಿಂದ ಸರ್ಕಾರಕ್ಕೆ ಲಾಭವಾಗುತ್ತಿದ್ದು, ಸವಾರರು ಭಾರೀ ದಂಡ ತೆರುತ್ತಿದ್ದಾರೆ. ಕೇವಲ ಸಿಲಿಕಾನ್ ಸಿಟಿಯೊಂದರಲ್ಲಿಯೇ ಸಂಚಾರಿ ಪೊಲೀಸರು ಏಳು ತಿಂಗಳಲ್ಲಿ 53.61 ಲಕ್ಷ ಪ್ರಕರಣ ದಾಖಲಿಸಿ, 35.38 ಕೋಟಿ ರೂ. ದಂಡ ಸಂಗ್ರಹಿಸಿದ್ದಾರೆ.
ರಾಜಧಾನಿಯಲ್ಲಿ ದಂಡದ ಮೂಲಕ ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ 391.96 ಕೋಟಿ ರೂ. ಗಳನ್ನು ಸಂಗ್ರಹಿಸಿದೆ. 2023ರ ಮಾರ್ಚ್ ನಿಂದ 2024ರ ಏಪ್ರಿಲ್‌ವರೆಗೆ ಒಂದೇ ವರ್ಷದ ಅವಧಿಯಲ್ಲಿ ಅತ್ಯಧಿಕ 155.24 ಕೋಟಿ ರೂ. ದಂಡ ವಸೂಲಾಗಿದೆ. ರಾಜಧಾನಿಯಲ್ಲಿ ಕಳೆದ ಜನವರಿ – ಜುಲೈ 31 ರವರೆಗೆ 35.38 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಸಂಚಾರ ಪೊಲೀಸರು ಹೈ – ರೆಸಲ್ಯೂಷನ್ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಗೆ ದಂಡ ವಿಧಿಸುತ್ತಿದ್ದರೂ ರಾಜಧಾನಿಯಲ್ಲಿನ ಸವಾರರು ಮಾತ್ರ ಇದುವರೆಗೂ ಪಾಠ ಕಲಿತಿಲ್ಲ. ಏಳು ತಿಂಗಳಲ್ಲಿ ಬೆಂಗಳೂರು ನಗರವೊಂದರಲ್ಲಿ 53.61 ಲಕ್ಷ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ದ್ವಿಚಕ್ರ ವಾಹನಗಳ ಪಾಲು ಹೆಚ್ಚಿದೆ.
ಏಳು ತಿಂಗಳಿಗೆ ಹೋಲಿಕೆ ಮಾಡಿದಾಗ ಏಪ್ರಿಲ್ ನಲ್ಲಿ ಪ್ರಕರಣಗಳ ಪ್ರಮಾಣದಲ್ಲಿ ಇಳಿಕೆಯಾಗಿದ್ದರೆ, ಮೇ ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅಲ್ಲದೇ, ಸಂಚಾರ ಪೊಲೀಸ್ ಬಿಡುಗಡೆ ಮಾಡಿರುವ ಅಂಕಿ ಅಂಶದಲ್ಲಿ ಜನವರಿಯಲ್ಲಿ 8.47 ಲಕ್ಷ, ಫೆಬ್ರವರಿಯಲ್ಲಿ 7.79 ಲಕ್ಷ, ಮಾರ್ಚ್‌ನಲ್ಲಿ 7.43 ಲಕ್ಷ, ಏಪ್ರಿಲ್ ನಲ್ಲಿ 6.90 ಲಕ್ಷ, ಮೇ ತಿಂಗಳಲ್ಲಿ 8.49 ಲಕ್ಷ, ಜೂನ್ ನಲ್ಲಿ 6.96 ಲಕ್ಷ ಹಾಗೂ ಜುಲೈನಲ್ಲಿ 7.53 ಲಕ್ಷ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ.
ನಗರದಾದ್ಯಂತ ಸಾವಿರಾರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ವರ್ಷದಲ್ಲಿ ಇಲ್ಲಿಯವರೆಗೆ ಒಟ್ಟು 51.67 ಲಕ್ಷ ಪ್ರಕರಣಗಳನ್ನು ದಾಖಲಿಸಿ, 34 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಪೊಲೀಸ್ ಇಲಾಖೆಯ ಅಂಕಿ- ಅಂಶ ತಿಳಿಸಿದೆ. ಇನ್ನು ಇದೇ ಪ್ರಕರಣಗಳನ್ನು ಹಿಂದಿನ ವರ್ಷಕ್ಕೆ ನೋಡಿದಾಗ 2022ರಲ್ಲಿ 104.66 ಲಕ್ಷ ಪ್ರಕರಣಗಳಿಂದ ಒಟ್ಟು 179.52 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. 2023ರಲ್ಲಿ 185.13 ಕೋಟಿ ರೂ. ದಂಡ ವಸೂಲಿ ಮಾಡಲಾಗಿದೆ. ಈ ವರ್ಷ ಇಲ್ಲಿಯವರೆಗೆ 53.61 ಲಕ್ಷ ಪ್ರಕರಣ ದಾಖಲಿಸಿ, 35.38 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ.