69 ವರ್ಷ ಪೂರೈಸಿರುವ ಟಾಲಿವುಡ್ ನಟ ಚಿರಂಜೀವಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಹೀಗಾಗಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಈ ವಯಸ್ಸಿನಲ್ಲಿ ಕೂಡ ನಟ ಚಿರಂಜೀವಿ ಹಲವಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರು ದಕ್ಷಿಣ ಭಾರತದ ಶ್ರೀಮಂತ ನಟರಲ್ಲಿ ಒಬ್ಬರು. ಇಲ್ಲಿಯವರೆಗೆ ನಟ ಚಿರಂಜೀವಿ 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪದ್ಮಭೂಷಣ ಮತ್ತು ಪದ್ಮವಿಭೂಷಣ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳ ಗೌರವಕ್ಕೆ ಪಾತ್ರರಾಗಿದ್ದಾರೆ. ನಟ, ನಿರ್ಮಾಪಕ, ರಾಜಕಾರಣಿಯೂ ಹೌದು. ಅವರ ಆಸ್ತಿ ಮೌಲ್ಯ 1650 ಕೋಟಿ ರೂಪಾಯಿ ಎಂದು ತಿಳಿದು ಬಂದಿದೆ.
ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿ ಅವರು 25 ಸಾವಿರ ಸ್ಕ್ವೇರ್ ಫೀಟ್ ನ ಮನೆ ಹೊಂದಿದ್ದಾರೆ. ಬೆಂಗಳೂರಿನ ಏರ್ ಪೋರ್ಟ್ ಹತ್ತಿರ ಫಾರ್ಮ್ ಹೌಸ್ ಹೊಂದಿದ್ದಾರೆ. ಚೆನ್ನೈನಲ್ಲಿಯೂ ಚಿರಂಜೀವಿ ಮನೆ ಹೊಂದಿದ್ದಾರೆ. 90ರ ದಶಕದಲ್ಲಿಯೇ ಫಿಲ್ಮ್ ನಗರದಲ್ಲಿ ಮನೆ ಖರೀದಿಸಿ ಬರೋಬ್ಬರಿ 70 ಕೋಟಿ ರೂ.ಗೆ ಮಾರಾಟ ಮಾಡಿದ್ದಾರೆ. ಅಲ್ಲದೇ, ಅವರ ಬಳಿ ಖಾಸಗಿ ಜೆಟ್ ಇದೆ. ದೇಶದಲ್ಲಿ ಸಂಚರಿಸಲು ಇದನ್ನೇ ಅವರು ಬಳಸುತ್ತಾರೆ.
ಸಾಕಷ್ಟು ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಇವರಿಗೆ ಕ್ರಿಕೆಟ್ ಕ್ರೇಜ್ ಕೂಡ ಇದ್ದು, ಕೇರಳ ಬ್ಲಾಸ್ಟರ್ ಎಫ್ ಸಿಯ ಸಹ ಮಾಲೀಕರಾಗಿದ್ದಾರೆ. ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇವರು ಸಾಕಷ್ಟು ಸಾಮಾಜಿಕ ಕೆಲಸಗಳನ್ನು ಮಾಡುತ್ತಾರೆ. 69 ವರ್ಷವಾದರೂ ಫಿಟ್ ಆಗಿಯೇ ಕಾಣುವ ಅವರನ್ನು ಕಂಡರೆ ಅಭಿಮಾನಿಗಳಿಗೆ ತುಂಬಾ ಪ್ರೀತಿ. ಸದ್ಯ ಅವರ ಅಭಿಮಾನಿಗಳು ಹುಟ್ಟು ಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಹಲವಾರು ಸೆಲೆಬ್ರಿಟಿಗಳು, ಗಣ್ಯರು ಕೂಡ ಶುಭ ಹಾರೈಸಿದ್ದಾರೆ. ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಚಿರಂಜೀವಿ ಕುಟುಂಬಸ್ಥರೊಂದಿಗೆ ಟೆಂಪಲ್ ರನ್ ನಡೆಸಿದ್ದಾರೆ.