ಬೆಂಗಳೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿ ರಾಜ್ಯಪಾಲರ ಅನುಮತಿ ರದ್ದು ಕೋರಿ (Prosecution) ಸಿಎಂ ಸಿದ್ದರಾಮಯ್ಯ (CM Siddaramaiah) ಹೈಕೋರ್ಟ್‌ನಲ್ಲಿ (High Court) ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ತಡೆಯಾಜ್ಞೆ (Stay order) ಕೋರಿದ್ದು, ಅರ್ಜಿಯ ವಿಚಾರಣೆ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪ್ರಾಸಿಕ್ಯೂಶನ್ ಗೆ ತಡೆ ಕೋರಿ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪೀಠದ ಮುಂದೆ ಸಿಎಂ ಪರ ವಕೀಲ ಶತಭೀಷ್ ಶಿವಣ್ಣ ಅರ್ಜಿ ಸಲ್ಲಿಸಿದರು. ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ವಕೀಲರು ಈ ವೇಳೆ ಮನವಿ ಮಾಡಿದರು. ಆದರೆ, ಮಧ್ಯಾಹ್ನ 2.30ಕ್ಕೆ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮುಂದೂಡಿದರು.
ರಾಜ್ಯಪಾಲರ ಅನುಮತಿ ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸ್ಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದ್ದಾರೆ.
ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಪಡಿಸಲು ಹೈಕೋರ್ಟ್ ಒಪ್ಪಿಗೆ ನೀಡಿತು. ಅರ್ಜಿಯಲ್ಲಿ 20 ಅಂಶಗಳನ್ನು ಸಿಎಂ ಉಲ್ಲೇಖಿಸಿದ್ದಾರೆ. ರಾಜ್ಯಪಾಲರು ಕಾನೂನು ಹಾಗೂ ಸಂವಿಧಾನದ ವಿರುದ್ಧ ಪ್ರಾಸಿಕ್ಯೂಶನ್ ಗೆ ಅನುಮತಿ ಕೊಟ್ಟಿದ್ದಾರೆ. ಎಸ್ ಓಪಿ ಕುರಿತು ರಾಜ್ಯಪಾಲರಿಗೆ ಅರಿವಿಲ್ಲ. ಕೇಂದ್ರ ಸರ್ಕಾರ ಮಾಡಿರುವ ಹೊಸ ಕಾನೂನಿನ ವಿರುದ್ಧ ನಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ನನ್ನ ಕೈವಾಡವಿಲ್ಲ. ಇದು ಸಿವಿಲ್ ಪ್ರಕರಣವೇ ಹೊರತು, ಕ್ರೈಮ್ ಅಲ್ಲ. ಮುಡಾದಲ್ಲಿ ಪಡೆದ ನಿವೇಶನಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನನ್ನ ಪತ್ನಿಗೆ ಅವರ ಸಹೋದರರಿಂದ ಬಂದ ಗಿಫ್ಟ್ ಅದು. ನನ್ನ ಪತ್ನಿಯ ಆಸ್ತಿಯನ್ನು ಮುಡಾ ಅಧಿಕಾರಿಗಳು ಅಕ್ರಮವಾಗಿ ಸ್ವಾಧೀನ ಪಡಿಸಿಕೊಂಡಿದ್ದಾರೆ.
ಹೀಗಾಗಿ ಅದಕ್ಕೆ ಪರ್ಯಾಯವಾಗಿ 14 ಸೈಟ್ ಗಳನ್ನು ನೀಡಿದ್ದಾರೆ. ಈ ಪ್ರಕ್ರಿಯೆಗಳು ಬಿಜೆಪಿಯ ಅಧಿಕಾರವಧಿಯಲ್ಲಿ ನಡೆದಿವೆ. ಪ್ರಕರಣ ಕೇಳಿ ಬರುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ. ಈ ನ್ಯಾಯಾಂಗ ತನಿಖೆಯ ಸಮಿತಿಯ ಮಾಹಿತಿಯನ್ನು ಕೂಡ ರಾಜ್ಯಪಾಲರು ಕೇಳಿಲ್ಲ. ಅಲ್ಲದೇ, ದೂರುದಾರರ ಬಗ್ಗೆ ಹಲವಾರು ಅನುಮಾನಗಳಿವೆ. ದೂರುದಾರ ಪ್ರದೀಪ್ ಜೆಡಿಎಸ್ ವಕ್ತಾರ. ಅಬ್ರಹಾಂ ಹಿಂದೆ ಹಲವು ದೂರುಗಳನ್ನು ಕೊಟ್ಟರೂ ತಾರ್ಕಿಕ ಅಂತ್ಯಕ್ಕೆ ಒಯ್ದಿಲ್ಲ. ಅಧಿಕಾರಿಯೋರ್ವರನ್ನು ಬ್ಲಾಕ್ ಮೇಲ್ ಮಾಡಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದು ಕೇವಲ ರಾಜಕೀಯ ಪ್ರೇರಿತ. ಮಾಜಿ ಪಿಎಂ ಎಚ್‌ಡಿ ದೇವೇಗೌಡ, ಕುಮಾರಸ್ವಾಮಿ ಹಾಗೂ ಬಿಎಸ್‌ವೈ ಸೇರಿದಂತೆ ಬಿಜೆಪಿಯ ಕೇಂದ್ರ ನಾಯಕರು ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರವಷ್ಟೇ ಇದು. ನನ್ನ ಪಾತ್ರ ಇಲ್ಲದಿದ್ದರೂ ನನ್ನ ವಿರುದ್ಧ ಪ್ರಾಸಿಕ್ಯೂಶನ್‌ಗೆ ಕೊಟ್ಟ ರಾಜ್ಯಪಾಲರ ಆದೇಶ ಸರಿಯಲ್ಲ. ಈ ನಿಟ್ಟಿನಲ್ಲಿ ಪ್ರಾಸಿಕ್ಯೂಷನ್ ಗೆ ಕೊಟ್ಟ ಕ್ರಮ ಸರಿಯಾಗಿಲ್ಲ ಎಂದು ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.